ನವದೆಹಲಿ, ಮೇ 3: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಭೀತಿ ಆವರಿಸಿದೆ. ಯಾವುದೇ ಕ್ಷಣದಲ್ಲಾದರೂ ಭಾರತೀಯ ಸೇನೆ ಪ್ರತೀಕಾರಕ್ಕೆ ಮುಂದಾಗಬಹುದು ಎಂಬ ಭೀತಿ ಪಾಕಿಸ್ತಾನವನ್ನು ಆವರಿಸಿದೆ. ಹೀಗಾಗಿ, ಸಂಭಾವ್ಯ ಯುದ್ಧ ಎದುರಿಸಲು ಪಾಕಿಸ್ತಾನ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆದರೆ, ಇತ್ತ ಭಾರತ ಯುದ್ಧ ಮಾಡುವುದು ಬಿಡಿ; ಅದಕ್ಕೂ ಮೊದಲೇ ರಾಜತಾಂತ್ರಿಕ ನಿರ್ಧಾರಗಳು ಹಾಗೂ ಇತರ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದೆ.
ಭಾರತ ಈಗಾಗಲೇ ಕೈಗೊಂಡಿರುವ ಕೆಲವು ಕ್ರಮಗಳು ಪಾಕಿಸ್ತಾನವನ್ನು ಆರ್ಥಿಕವಾಗಿ ಮತ್ತು ಇತರ ಕೆಲವು ಆಯಾಮಗಳಲ್ಲಿ ಪ್ರಪಾತಕ್ಕೆ ತಳ್ಳಿದೆ. ಆ ಮೂಲಕ, ಉಗ್ರಗಾಮಿಗಳನ್ನು ಪೋಷಿಸುವ ಪಾಕಿಸ್ತಾನ ಸೇನೆ ಹಾಗೂ ಗುಪ್ತಚರ ಸಂಸ್ಥೆ ಐಎಸ್‌ಐಯ ಊಹೆಗೂ ನಿಲುಕದ ತಿರುಗೇಟನ್ನು ಭಾರತ ನೀಡುತ್ತಿದೆ.