ಲಂಡನ್, ಮಾರ್ಚ್ 06: ಲಂಡನ್ನಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮೇಳೆ ಖಲಿಸ್ತಾನಿ ಉಗ್ರರು ದಾಳಿಗೆ ಮುಂದಾಗಿದ್ದ ವಿಚಾರ ಕುರಿತು ಭಾರತ ಪ್ರತಿಕ್ರಿಯಿಸಿದೆ. ಭದ್ರತಾ ವೈಫಲ್ಯವನ್ನು ಭಾರತ ಖಂಡಿಸಿದೆ. ಪ್ರತ್ಯೇಕತಾವಾದಿ ಶಕ್ತಿಗಳಿಂದ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳ ದುರುಪಯೋಗವಾಗುತ್ತಿದೆ. ಪ್ರತ್ಯೇಕತಾವಾದಿಗಳು ಮತ್ತು ಉಗ್ರಗಾಮಿಗಳ ಗುಂಪಿನ ಪ್ರಚೋದನಕಾರಿ ಚಟುವಟಿಕೆಗಳನ್ನು ಖಂಡಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಜೈಶಂಕರ್ ಯುಕೆ ಭೇಟಿಯ ಸಮಯದಲ್ಲಿ ಭದ್ರತಾ ಉಲ್ಲಂಘನೆಯ ದೃಶ್ಯಗಳನ್ನು ನಾವು ನೋಡಿದ್ದೇವೆ, ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಯುಕೆ ಮತ್ತು ಐರ್ಲೆಂಡ್ಗೆ ಅರು ದಿನಗಳ ಭೇಟಿಯ ಸಮಯದಲ್ಲಿ, ವಿದೇಶಾಂಗ ಸಚಿವರು ಉನ್ನತ ಮಟ್ಟದ ಮಾತುಕತೆಗಳು, ವಿದೇಶಾಂಗ ನೀತಿಯ ತೊಡಗಿಸಿಕೊಳ್ಳುವಿಕೆಗಳು ಮತ್ತು ಭಾರತೀಯ ಸಮುದಾಯದೊಂದಿಗೆ ಸಂವಾದಗಳನ್ನು ನಡೆಸಲಿದ್ದಾರೆ. ಈ ಭೇಟಿಯು ಎರಡೂ ದೇಶಗಳೊಂದಿಗಿನ ಭಾರತದ ಸ್ನೇಹ ಸಂಬಂಧಕ್ಕೆ ಹೊಸ ಉತ್ತೇಜನ ನೀಡುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.