ನ್ಯೂಯಾರ್ಕ್, ಅಮೆರಿಕ: ಪರಮಾಣು ಸಂಘರ್ಷಕ್ಕೆ ತಿರುಗುತ್ತಿದ್ದ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸೇನಾ ಸಂಘರ್ಷವನ್ನು ನಾವು ಮಾತುಕತೆ ಮೂಲಕ ಕೊನೆಗೊಳಿಸಿದೆವು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟಂಪ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಶುಕ್ರವಾರ ಶ್ವೇತಭವನದಲ್ಲಿ ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಮತ್ತು ಅರ್ಮೇನಿಯಾ ಪ್ರಧಾನಿ ನಿಕೋಲ್ ಪಶಿನ್ಯಾನ್ ನಡುವಿನ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಮಾತನಾಡಿದ ಟ್ರಂಪ್, ಭಾರತ-ಪಾಕ್ ಯುದ್ಧದ ವೇಳೆ ಆರು ಜೆಟ್ಗಳನ್ನು ಹೊಡೆದುರುಳಿಸಲಾಗಿತ್ತು ಎಂದಿದ್ದಾರೆ. ಆದರೆ, ಎರಡೂ ದೇಶಗಳ ಜೆಟ್ಗಳು ನಷ್ಟವಾಗಿದೆಯಾ ಅಥವಾ ಒಂದು ದೇಶದ ಜೆಟ್ ಮಾತ್ರ ನಾಶವಾಗಿವೆಯಾ ಎಂಬುದರ ಕುರಿತು ಸ್ಪಷ್ಟವಾಗಿ ತಿಳಿಸಿಲ್ಲ. ಈ ಹಿಂದೆ ಕಳೆದ ತಿಂಗಳಲ್ಲಿ ಈ ಕುರಿತು ಹೇಳಿಕೆ ನೀಡಿದ್ದ ಟ್ರಂಪ್, ಐದು ಜೆಟ್ ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು ಎಂದು ಹೇಳಿದ್ದರು.
ಟ್ರಂಪ್ ಹೇಳಿಕೆಯನ್ನು ಈಗಾಗಲೇ ಅಲ್ಲಗಳೆದಿರುವ ಭಾರತ, ವಿಶ್ವವ ಯಾವುದೇ ದೇಶದ ಮಧ್ಯಸ್ಥಿಕೆ ಇಲ್ಲದೇ, ಎರಡು ದೇಶದ ಸೇನಾ ಮುಖ್ಯಸ್ಥರ ಮಾತುಕತೆಯೊಂದಿಗೆ ಕದನ ವಿರಾಮ ಘೋಷಣೆ ಮಾಡಲಾಗಿತ್ತು ಎಂದು ಸ್ಪಷ್ಟಪಡಿಸಿದೆ.
ಅಜೆರ್ಬೈಜಾನ್ ಮತ್ತು ಅರ್ಮೇನಿಯಾ ಇಬ್ಬರು ದೇಶದ ಸಮ್ಮುಖದಲ್ಲಿ ಮಾತನಾಡಿರುವ ಟ್ರಂಪ್, ಅಧ್ಯಕ್ಷನಾಗಿ ಜಗತ್ತಿನಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತರುವುದು ನನ್ನ ಮಹತ್ವದ ಆಕಾಂಕ್ಷೆಯಾಗಿದೆ. ಭಾರತ ಮತ್ತು ಪಾಕಿಸ್ತಾನದ ಯಶಸ್ವಿ ಮಾತುಕತೆ ಬಳಿಕ, ಇಂದು ಈ ಎರಡು ದೇಶಗಳ ನಡುವೆ ಸಹಿ ಹಾಕಲಾಗಿದೆ ಎಂದಿದ್ದಾರೆ.
ವ್ಯಾಪಾರದ ಹೊರತಾಗಿ ಯಾವುದೇ ಕಾರಣವಿಲ್ಲದೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ನಿಲ್ಲಿಸಲಾಯಿತು. ಜಗತ್ತಿಗೆ ತಮ್ಮನ್ನು ಪ್ರದರ್ಶಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದೇಶದೊಂದಿಗೆ ನಾನು ವ್ಯಾಪಾರ ಮಾಡುವುದಿಲ್ಲ ಎಂಬುದು ನಿಮಗೆ ಗೊತ್ತಿದೆ. ಅವು ಪರಮಾಣು ದೇಶಗಳು ಎಂದು ಟ್ರಂಪ್ ತಿಳಿಸಿದರು.