ಮುದ್ದೇಬಿಹಾಳ: ತಮ್ಮ 20 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.5 ರಿಂದ ಪೌರನೌಕರರು ಅನಿಷ್ಠಾವಧಿಯ ಮುಷ್ಕರ ನಡೆಸಲಿದ್ದಾರೆ. ಆ ಸಂದರ್ಭ ಆಗುವ ಎಲ್ಲ ಸಮಸ್ಯೆಗಳಿಗೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ಇದನ್ನು ತಪ್ಪಿಸಬೇಕಾದರೆ ಪೌರ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಮುದ್ದೇಬಿಹಾಳ ಶಾಖಾ ಕಚೇರಿಯ ಪದಾಧಿಕಾರಿಗಳು, ಸದಸ್ಯರು ಸೋಮವಾರ ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ನೌಕರರು ಅನೇಕ ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಜನತೆಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಲವು ಬಾರಿ ಮನವಿ ಸಲ್ಲಿಸಿದರೂ ಪರಿಗಣಿಸಿಲ್ಲ. ಇದರಿಂದ ಬೇಸತ್ತು ಸಂಘದ ಕೇಂದ್ರ ಕಛೇರಿಯವರು ಮುಷ್ಕರಕ್ಕೆ ಕರೆ ನೀಡಿರುವುದರಿಂದ ನಾವೂ ಸಹಿತ ಅಂದಿನಿಂದ ಮುಷ್ಕರ ಪ್ರಾರಂಭಿಸುತ್ತೇವೆ. ಬೇಡಿಕೆ ಈಡೇರದಿದ್ದರೆ ಹಂತ ಹಂತವಾಗಿ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಂದಿನ ನಮ್ಮ ಹೋರಾಟ ಪ್ರಾರಂಭದಿಂದ ಮುಕ್ತಾಯದವರೆಗೂ ಪುರಸಭೆ ವಹಿಸುವ ಯಾವುದೇ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವುದಿಲ್ಲ. ನಮ್ಮೆಲ್ಲ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮನವಿ ಸ್ವೀಕರಿಸಿದರು. ಸಂಘದ ಅಧ್ಯಕ್ಷ ಮಹಾಂತೇಶ ಕಟ್ಟಿಮನಿ, ಉಪಾಧ್ಯಕ್ಷ ರಾಮಪ್ಪ ಚಲವಾದಿ, ಕಾರ್ಯದರ್ಶಿ ಶರಣಪ್ಪ ಚಲವಾದಿ, ಖಜಾಂಚಿ ಚನ್ನಪ್ಪ ಮೂಕಿಹಾಳ, ಸಂಘಟನಾ ಕಾರ್ಯದರ್ಶಿ ಉಮೇಶ ದೇವರ, ಜಿಲ್ಲಾ ನಿರ್ದೇಶಕರಾದ ಶ್ರೀ ಮಲ್ಲಿಕಾರ್ಜುನ ಗುನ್ನಾಪುರ, ಎಸ್.ಎಚ್.ಮೂಲಿಮನಿ, ಜಾವೀದ ನಾಯ್ಕೋಡಿ, ಶಿವಪ್ಪ ಬೋಳಿ, ಸಾಬಣ್ಣ ಚಲವಾದಿ, ಸೈಪನಮುಲ್ಕ ಮಾನ್ಯಾಳ, ಸದಸ್ಯರಾದ ಎನ್.ಎಸ್.ಪಾಟೀಲ, ಸಂತೋಷ ಮಠ, ಶಿವಾನಂದ ಗಂಜಿಹಾಳ, ಶಿವಪ್ಪ ಚಲವಾದಿ, ಪ್ರಸನ್ನಕುಮಾರ ಅವಟಿ, ದ್ಯಾಮಣ್ಣ ಭಜಂತ್ರಿ, ತಿಮ್ಮಣ್ಣ ಬಂಡಿವಡ್ಡರ, ಶಿವಪ್ಪ ಜತ್ತಿ, ಯಮನಪ್ಪ ಚಲವಾದಿ, ರಾಜು ಚಲವಾದಿ, ಎಸ್.ಕೆ.ಹುನಗುಂದ, ಶಿವರಾಯ ಚಲವಾದಿ, ಆರ್.ವಿ.ಚೊಳಚಗುಡ್ಡ, ಲಕ್ಕವ್ವ ಕಲ್ಯಾಣಿ, ರೇಣುಕಾ ಚಲವಾದಿ, ಪರುಶರಾಮ ಬಿಜಾಪೂರ, ಅನಸಣ್ಣ ಚಲವಾದಿ, ಮರೆವ್ವ ಚಲವಾದಿ, ಮಲ್ಲವ್ವ ಚಲವಾದಿ ಇನ್ನಿತರರು ಇದ್ದರು.


