ಯಲಹಂಕ (ಬೆಂಗಳೂರು): ಕಟ್ಟಡ ನಿರ್ಮಾಣಕ್ಕಾಗಿ ಪಾಯ ಅಗೆಯುತ್ತಿದ್ದ ವೇಳೆ ಮಳೆ ನೀರು ಪಾಯಕ್ಕೆ ನುಗ್ಗಿ ಪಾಯದಲ್ಲಿನ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ಕಳೆದ ರಾತ್ರಿ ಯಲಹಂಕದಲ್ಲಿ ಸಂಭವಿಸಿದೆ.
ಆಂಧ್ರ ಪ್ರದೇಶ ಮೂಲದ ಜೆ.ಶಿವಾ (32) ಮತ್ತು ಮಧುಸುದನ್ ರೆಡ್ಡಿ (58) ಮೃತ ಕಾರ್ಮಿಕರು. ಇಲ್ಲಿನ ಎಂಬೆಸ್ಸಿ ಗ್ರೂಪ್ ಸಂಸ್ಥೆಯ ಕಟ್ಟಡದಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ.
ಕಟ್ಟಡ ನಿರ್ಮಾಣಕ್ಕಾಗಿ ಕಾರ್ಮಿಕರು ದೊಡ್ಡದಾದ ಗುಂಡಿ ತೆಗೆದಿದ್ದರು. ಈ ಗುಂಡಿಗೆ ಇಳಿದು ಕೆಲಸ ಮಾಡುತ್ತಿದ್ದಾಗ ರಾತ್ರಿ ಅನಿರೀಕ್ಷಿತವಾಗಿ ಮಳೆ ಸುರಿದಿದೆ. ಪರಿಣಾಮ ಗುಂಡಿಯಲ್ಲಿ ಮಳೆ ನೀರು ಸಂಗ್ರಹವಾಗಿದ್ದರಿಂದ ಕಾರ್ಮಿಕರು ತಕ್ಷಣವೇ ಹೊರಬರಲು ಯತ್ನಿಸಿದ್ದರು. ಈ ವೇಳೆ, ಇಬ್ಬರ ಮೇಲೆ ಗುಂಡಿಯಲ್ಲಿನ ಮಣ್ಣು ಕುಸಿದಿದೆ. ಪರಿಣಾಮ ಮಣ್ಣಿನಲ್ಲಿ ಸಿಲುಕಿದ್ದ ಇಬ್ಬರು ಕಾರ್ಮಿಕರಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿತ್ತು. ಆತನನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಆತನು ಸಹ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.
ಮೃತ ಇಬ್ಬರು ಕಾರ್ಮಿಕರು ಆಂಧ್ರ ಮೂಲದವರೆಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಶವಾಗಾರಕ್ಕೆ ರವಾನಿಸಲಾಗಿದ್ದು, ಈ ಬಗ್ಗೆ ಯಲಹಂಕ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.