ಬೆಂಗಳೂರು: ವಿಶೇಷಚೇತನ ಅಧಿಕಾರಿ/ನೌಕರರಿಗೆ ಗುಂಪು-ಎ (ಕಿರಿಯ ಶ್ರೇಣಿ) ಮತ್ತು ಗುಂಪು-ಬಿ ವೃಂದಗಳಿಗೆ ನೀಡುವ ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿ ಕಲ್ಪಿಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮತಿಸಿದೆ.
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರಲ್ಲಿ ಪರಿಭಾಷಿಸಲಾಗಿರುವ ಎದ್ದುಕಾಣುವ ಅಂಗವೈಕಲ್ಯವುಳ್ಳ ಅಧಿಕಾರಿಗಳಿಗೆ ಗುಂಪು-ಬಿ ಮತ್ತು ಗುಂಪು-ಎ (ಕಿರಿಯ ಶ್ರೇಣಿ) ಹುದ್ದೆಗಳಲ್ಲಿ ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ತಾಲೂಕುವಾರು ಜಾತಿ ಸಮೀಕ್ಷೆ ದತ್ತಾಂಶ ನೀಡಲು ಸೂಚನೆ: ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ಸಮೀಕ್ಷಾ ವರದಿ ಬಗ್ಗೆ ಚರ್ಚೆ ನಡೆದಿದೆ. ಸಿಎಂಗೆ ಹಲವು ಸಚಿವರು ತಮ್ಮ ಅಭಿಪ್ರಾಯ ನೀಡಿದ್ದಾರೆ. ಇನ್ನೂ ಕೆಲವರ ಅಭಿಪ್ರಾಯ ಪಡೆಯ ಬೇಕಾಗಿದೆ. ಹೆಚ್ಚಿನ ಮಾಹಿತಿಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಒದಗಿಸಿದ್ದಾರೆ. ಮುಂದಿನ ವಾರದ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ. ಸಚಿವರಿಗೆ ತಾಲೂಕುವಾರು ದತ್ತಾಂಶ ನೀಡಲು ಸೂಚನೆ ನೀಡಲಾಗಿದೆ. ಸುಮಾರು 11 ಸಚಿವರು ಲಿಖಿತ ಅಭಿಪ್ರಾಯ ಸಲ್ಲಿಸಿದ್ದಾರೆ. ಇನ್ನೂ ಉಳಿದವರಿಗೆ ಲಿಖಿತ ಅಭಿಪ್ರಾಯ ನೀಡಲು ಸಿಎಂ ಸೂಚಿಸಿದ್ದಾರೆ.