ನವದೆಹಲಿ: ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಾಗಿರುವ ಎಂಜಿಎನ್ಆರ್ಇಜಿಎ (ಮನರೇಗಾ) ಅಡಿಯಲ್ಲಿ ಕನಿಷ್ಠ ವೇತನ ಮತ್ತು ಖಾತರಿ ಕೆಲಸದ ದಿನಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಂಗಳವಾರ ಆಗ್ರಹಿಸಿದರು.
ರಾಜ್ಯಸಭೆ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಸೋನಿಯಾ ಗಾಂಧಿ, ಮನರೇಗಾ ಯೋಜನೆಗೆ ಬಜೆಟ್ನಲ್ಲಿ ಈ ಹಿಂದಿನ 86 ಸಾವಿರ ಕೋಟಿ ರೂ. ಅನುದಾನವನ್ನು ಸ್ಥಿರವಾಗಿಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರವು ಯೋಜನೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು. ಯೋಜನೆಯನ್ನು ಮುಂದುವರಿಸಿಕೊಂಡು ಹೋಗಲು ಮತ್ತು ವಿಸ್ತರಿಸಲು ಯೋಜನೆಗೆ ಸಾಕಷ್ಟು ಹಣಕಾಸು ನೀಡಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ಸೂಕ್ತ ಸಮಯದಲ್ಲಿ ವೇತನ ವಿತರಣೆಯೊಂದಿಗೆ ಕನಿಷ್ಠ ವೇತನವನ್ನು ದಿನಕ್ಕೆ 400 ರೂ.ಗೆ ಹೆಚ್ಚಿಸಬೇಕು ಹಾಗೂ ಖಾತರಿಪಡಿಸಿದ ಕೆಲಸದ ದಿನಗಳ ಸಂಖ್ಯೆಯನ್ನು ವರ್ಷಕ್ಕೆ 100ರಿಂದ 150ಕ್ಕೆ ಹೆಚ್ಚಿಸಬೇಕು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಗ್ರಹಿಸಿದರು.
“ಮನರೇಗಾ ಅಡಿಯಲ್ಲಿ ಗೌರವಯುತ ಉದ್ಯೋಗ ಮತ್ತು ಆರ್ಥಿಕ ಭದ್ರತೆಯನ್ನು ನೀಡಲು ಈ ಕ್ರಮಗಳು ಅತ್ಯಗತ್ಯ” ಎಂದು ಅವರು ಹೇಳಿದರು.