ಬೆಂಗಳೂರು, ಜನವರಿ 17: ಕರ್ನಾಟಕ ಜನತೆಯ ಹಲವು ದಿನಗಳ ಕನಸು ನನಸಾಗಿದೆ. ಬೆಂಗಳೂರಲ್ಲಿ ಅಮೆರಿಕಾ ದೂತಾವಾಸ ಕಚೇರಿ ಉದ್ಘಾಟನೆಯಾಗಿದೆ. ಆದರೆ, ವೀಸಾ ಸೇವೆ ಇನ್ನೂ ವಿಳಂಬವಾಗಲಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಎಂಬಿ ಪಾಟೀಲ್, ಸಚಿವ ಪ್ರಿಯಾಂಕ್ ಖರ್ಗೆ, ಸಂಸದ ತೇಜಸ್ವಿ ಸೂರ್ಯ, ಸಂಸದ ಡಾ ಮಂಜುನಾಥ್ ಮತ್ತು ಅಮೆರಿಕಾ ರಾಯಭಾರಿ ಅಧಿಕಾರಿಗಳು ಭಾಗಿಯಾಗಿದ್ದರು. ಹಾಗೇ ಖ್ಯಾತ ಉದ್ಯಮಿ ಕಿರಣ್ ಮಜುಂದಾರ್ ಷಾ, ಕ್ರಿಸ್ ಗೋಪಾಲಕೃಷ್ಣನ್ ಕೂಡ ಭಾಗವಹಿಸಿದ್ದರು.
ಈಗಾಗಲೇ 12 ದೂತಾವಾಸ ಕಚೇರಿ ಬೆಂಗಳೂರಲ್ಲಿವೆ. ಇನ್ನಷ್ಟು ದೇಶಗಳು ಇಲ್ಲಿ ದೂತವಾಸ ಕಚೇರಿ ತೆರೆಯಬೇಕೆಂದು ನಮ್ಮ ಬಯಕೆ ಇದೆ. ಅಮೆರಿಕ ಮತ್ತು ಭಾರತದ ಬಾಂಧವ್ಯ ವೃದ್ಧಿಗೆ ನಿರಂತರ ಪ್ರಯತ್ನ ನಡೆಯುತ್ತಿದೆ. ಬೆಂಗಳೂರಿಗೆ ಸಾಕಷ್ಟು ಸಾಮರ್ಥ್ಯ ಇದ್ದು ಅದರ ಬಳಕೆಯಾಗಬೇಕು. ಬೆಂಗಳೂರಿನಲ್ಲಿ 1 ವರ್ಷದಲ್ಲಿ 8.80 ಲಕ್ಷ ಪಾಸ್ ಪೋರ್ಟ್ ವಿತರಣೆಯಾಗಿದೆ. ಅಂದರೆ 10 ವರ್ಷ ಅವಧಿಯಲ್ಲಿ ಎಷ್ಟು ಪಾಸ್ ಪೋರ್ಟ್ ವಿತರಣೆಯಾಗಿರಬಹುದು, ಅದರ ಮಹತ್ವ ಅರಿಯಬೇಕು ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದರು.