ವಿಜಯನಗರ(ಹೊಸಪೇಟೆ), : ಸರ್ಕಾರಿ ಸೌಲಭ್ಯಗಳು ಹಾಗೂ ಸಾರ್ವಜನಿಕ ಸೇವೆಗಳನ್ನು ಸಮರ್ಪಕವಾಗಿ ಪಡೆಯಲು ಮಾಹಿತಿ ಹಕ್ಕುನ್ನು ಸದ್ಭಳಕೆ ಮಾಡಿಕೊಳ್ಳಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಲ್.ಆರ್.ಶಂಕರ್ ನಾಯ್ಕ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ವಿಜಯ ವಿಠಲ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾಹಿತಿ ಹಕ್ಕು ಕಾರ್ಯಗಾರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಬುಧವಾರ ಅವರು ಮಾತನಾಡಿದರು,
ಆರ್‌ಟಿಐ ಕಾಯಿದೆಯನ್ನು ತಿಳಿಯುವ ನಿಟ್ಟಿನಲ್ಲಿ ಕಾರ್ಯಾಗಾರ ತುಂಬಾ ಉಪಯುಕ್ತವಾಗಿದೆ. ಬಹುತೇಕರು ಸರ್ಕಾರ ಕಚೇರಿಗಳ ಸೇವೆಗಳು, ಯೋಜನೆಗಳು ಹಾಗೂ ಅನೇಕ ಮಾಹಿತಿಗಳನ್ನು ಪ್ರಶ್ನಿಸುವ ಅನಿವಾರ್ಯತೆ ಇರುತ್ತದೆ. ಇಂತಹವರಿಗೆ ಮಾಹಿತಿ ಹಕ್ಕು ಹೇಗೆ ಬಳಸಬೇಕೆಂಬ ಮಾಹಿತಿ ಇರುವುದಿಲ್ಲ ಹಾಗಾಗೀ ಪ್ರತಿಯೊಬ್ಬರು ಮಾಹಿತಿ ಹಕ್ಕು ಕಾಯಿದೆಯ ಪರಿಚಯ, ವಿಧಾನಗಳನ್ನು ತಿಳಿಯಲು ಈ ಕಾರ್ಯಾಗಾರ ಅನುಕೂಲವಾಗಿದೆ ಎಂದರು.
ಮಾಹಿತಿ ಹಕ್ಕು ಸಂಪನ್ಮೂಲ ವ್ಯಕ್ತಿ ಹೊಳಗುಂದಿ ಎ.ಎಂ.ಪಿ.ವಾಗೇಶ ಅವರು ಮಾತನಾಡಿ, ಎಲ್ಲಾ ಬಟವಾಡೆ ಅಧಿಕಾರಿಗಳು ಹಾಗೂ ಲಿಪಿಕ ನೌಕರರಿಗೆ ಮಾಹಿತಿ ಹಕ್ಕು ಅಧಿನಿಯಮದಲ್ಲಿ ಕಾಯ್ದೆಯ ಉದ್ದೇಶಗಳು, ಸಾರ್ವಜನಿಕ ಪ್ರಾಧಿಕಾರಗಳ ಜವಾಬ್ದಾರಿಗಳು, ಮತ್ತು ನಾಗರಿಕರು ಮಾಹಿತಿಯನ್ನು ಹೇಗೆ ಪಡೆಯಬಹುದು ಎಂಬುದರ ಕುರಿತು ಮಾಹಿತಿಯನ್ನು ನೀಡಿದರು. ನಾಗರಿಕರಿಗೆ ಮಾಹಿತಿ ಪಡೆಯುವ ಹಕ್ಕನ್ನು ಒದಗಿಸುವ ಮೂಲಕ ಸರ್ಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಆರ್‌ಟಿಐ ಕಾಯಿದೆ 2005 : ಭಾರತದ ಸಂವಿಧಾನವು ಎಲ್ಲಾ ವ್ಯಕ್ತಿಗಳ ಸಮಾನತೆ, ಸ್ವಾತಂತ್ರ‍್ಯ ಮತ್ತು ನ್ಯಾಯವನ್ನು ಖಾತ್ರಿಪಡಿಸುತ್ತದೆ ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ಸೂಚ್ಯವಾಗಿ ಕಡ್ಡಾಯಗೊಳಿಸುತ್ತದೆ. ಮಾಹಿತಿ ಹಕ್ಕು ಕಾಯಿದೆ 2005, ನಾಗರಿಕರು ಸಾರ್ವಜನಿಕ ಪ್ರಾಧಿಕಾರಗಳಿಂದ ಮಾಹಿತಿ ಪಡೆಯಲು ಅವಕಾಶ ನೀಡುತ್ತದೆ, ಇದು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಆರ್‌ಟಿಐ ಅರ್ಜಿಯು ಸ್ಪಷ್ಟವಾದ ಮತ್ತು ನಿರ್ದಿಷ್ಟವಾದ ಪ್ರಶ್ನೆಗಳನ್ನು ಒಳಗೊಂಡಿರಬೇಕು. ಉದ್ದವಾದ ಅಥವಾ ಅಸ್ಪಷ್ಟವಾದ ಪ್ರಶ್ನೆಗಳು ಅರ್ಜಿಯ ತಿರಸ್ಕಾರಕ್ಕೆ ಕಾರಣವಾಗಬಹುದು. ಕೇವಲ ದಾಖಲೆಗಳು ಮತ್ತು ವಾಸ್ತವಗಳ ಆಧಾರದ ಮೇಲೆ ಮಾತ್ರ ಮಾಹಿತಿ ಕೇಳಬಹುದು. ಊಹಾತ್ಮಕ ಪ್ರಶ್ನೆಗಳನ್ನು ಕೇಳುವುದು ಸೂಕ್ತವಲ್ಲ. ವೈಯಕ್ತಿಕ ದೂರುಗಳನ್ನು ಪರಿಹರಿಸಲು, ವಿವಾದಗಳನ್ನು ಬಗೆಹರಿಸಲು ಆರ್‌ಟಿಐ ಕಾಯಿದೆಯನ್ನು ದುರುಪಯೋಗಪಡಿಸಿಕೊಳ್ಳಬಾರದು. ಇದು ಸರ್ಕಾರಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯಲು ರೂಪಿಸಲಾದ ಕಾಯ್ದೆಯಾಗಿದೆ ಎಂದರು.
ಈ ಕಾರ್ಯಗಾರದಲ್ಲಿ ಆರ್‌ಸಿಹೆಚ್ ಅಧಿಕಾರಿ ಡಾ.ಜಂಬಯ್ಯ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಭಾಸ್ಕರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖ ಗೌಡ ಸೇರಿದಂತೆ ಆರೋಗ್ಯ ಇಲಾಖೆಯ ಅನುಷ್ಠಾನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಸಾರ್ವಜನಿಕ ಸೇವೆಗಳಿಗೆ ಮಾಹಿತಿ ಹಕ್ಕನ್ನು ಸದ್ಬಳಕೆ ಮಾಡಿಕೊಳ್ಳಲಿ : ಡಾ.ಶಂಕರನಾಯ್ಕ
