ಬೆಂಗಳೂರು: ಭಾರತದಾದ್ಯಂತ ಈ ನೈಋತ್ಯ ಮಾನ್ಸೂನ್ನಲ್ಲಿ ಸಾಮಾನ್ಯಕ್ಕಿಂತ ಶೇ.5 ರಷ್ಟು ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದ್ದಾರೆ. ಆದರೆ ಕರ್ನಾಟಕಕ್ಕೆ, ವಿಶೇಷವಾಗಿ ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಬಗ್ಗೆ ಕರ್ನಾಟಕದ ಹವಾಮಾನ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಜೂನ್ 1 ರಂದು ಮುಂಗಾರು ಪ್ರವೇಶಿಸಬೇಕಿತ್ತು, ಆದರೆ ಐದು ದಿನ ಮುಂಚಿತವಾಗಿ, ಮೇ 27 ರಂದು ಕೇರಳ ಕರಾವಳಿಯನ್ನು ಮಾನ್ಸೂನ್ ಅಪ್ಪಳಿಸುವ ಸಾಧ್ಯತೆಯಿದೆ. ಜಾಗತಿಕ ಹವಾಮಾನ ಅಂಶಗಳ ಆಧಾರದ ಮೇಲೆ ಇಡೀ ದೇಶಕ್ಕೆ ಹೆಚ್ಚಿನ ಮಳೆಯ ಮುನ್ಸೂಚನೆ ನೀಡಲಾಗಿದೆ ಎಂದು ಐಎಂಡಿ-ಬೆಂಗಳೂರಿನ ನಿರ್ದೇಶಕ ಎನ್. ಪುವಿಯರಸನ್ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ. ದಕ್ಷಿಣ ಒಳನಾಡಿನಲ್ಲಿ ಹೆಚ್ಚುವರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹೆಚ್ಚುತ್ತಿರುವ ತಾಪಮಾನ ಮತ್ತು ನಗರೀಕರಣದ ಎಫೆಕ್ಟ್ ಮಳೆಯ ಪ್ರಮಾಣದಲ್ಲಿಯೂ ಸಹ ಪಾತ್ರವಹಿಸುತ್ತವೆ ಎಂದಿದ್ದಾರೆ.
ಮಳೆಯ ಮೇಲೆ ಪ್ರಭಾವ ಬೀರುವಲ್ಲಿ ತಾಪಮಾನ ಏರಿಕೆಯೂ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಪುವಿಯರಸನ್ ತಿಳಿಸಿದ್ದಾರೆ. ಕಳೆದ ವರ್ಷ, ಬೆಂಗಳೂರಿನಲ್ಲಿ ದಾಖಲಾದ ಗರಿಷ್ಠ ತಾಪಮಾನವು ಮೇ ತಿಂಗಳಲ್ಲಿ ಸುಮಾರು 36 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಈ ವರ್ಷ, ಇದು 33 ಡಿಗ್ರಿ ಸೆಲ್ಸಿಯಸ್ ಇದೆ. ಪ್ರಸ್ತುತ, ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿದೆ, ಆದರೆ ಬೆಂಗಳೂರಿನಲ್ಲಿ ಅಷ್ಟೊಂದು ಹೆಚ್ಚು ಮಳೆಯಾಗಿಲ್ಲ.
ಬೆಳಗಾವಿ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಕರ್ನಾಟಕವು ಮೇ 2023 ರಲ್ಲಿ 86.4 ಮಿಮೀ ಮಳೆಯನ್ನು ಕಂಡಿದೆ, ಇದು ಸಾಮಾನ್ಯ ಮುನ್ಸೂಚನೆಯ 73.7 ಮಿಮೀ ಮಳೆಯಾಗಿದೆ. ಮೇ 2024 ರಲ್ಲಿ, ರಾಜ್ಯದಲ್ಲಿ 118 ಮಿಮೀ ಮಳೆಯಾಗಿತ್ತು.