ವಿಶ್ವಸಂಸ್ಥೆ: ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ನಡೆಸುವುದು ಹಾಗೂ ಧರ್ಮದ ಹೆಸರಿನಲ್ಲಿ ನಾಗರಿಕರನ್ನು ಕೊಲ್ಲುವುದು ಕ್ಷಮಿಸಲಾಗದ ಅಪರಾಧ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟಾನಿಯೋ ಗುಟೆರಸ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವೆ ಯುದ್ಧದ ಕಾರ್ಮೋಡ ಆವರಿಸಿರುವ ಹಿನ್ನೆಲೆಯಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು, ಭಾರತೀಯ ಕಾಲಮಾನದ ಪ್ರಕಾರ ಮೇ 5ರ ಮಧ್ಯರಾತ್ರಿ ಸಭೆ ನಡೆಸಿತು.
ಸಭೆಗೂ ಮುನ್ನ ನಡೆದ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳುಳ್ಳ ಸಾಮಾನ್ಯ ಸಭೆಯು ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲೇ ನಡೆಯಿತು. ಆ ಸಭೆಯ ಅಧ್ಯಕ್ಷತೆ ವಹಿಸಿದ್ದ ಗುಟೆರಸ್ ಅವರು, ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರಿಂದ ನಡೆದಿದ್ದ ಪ್ರವಾಸಿಗರ ಹತ್ಯೆಯನ್ನು ಬಲವಾಗಿ ಖಂಡಿಸಿದರು.
ಭಾರತ ಮತ್ತು ಪಾಕಿಸ್ತಾನಗಳೆರಡೂ ಯುದ್ಧದ ಮನಸ್ಥಿತಿಯಿಂದ ಹೊರಬಂದು ಪರಸ್ಪರ ಶಾಂತಿ ಮತ್ತು ಸಹಕಾರದ ಮೂಲಕ ಭಯೋತ್ಪಾದನೆಯನ್ನು ಹತ್ತಿಕ್ಕಲು ಕೈ ಜೋಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.