ಬೆಂಗಳೂರು,18: 175 ಪ್ರಯಾಣಿಕರ ಹೊತ್ತು ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಹವಾ ನಿಯಂತ್ರಣ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನವು ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
175 ಪ್ರಯಾಣಿಕರನ್ನು ಹೊತ್ತ ದೆಹಲಿಯಿಂದ ಸಂಜೆ 5 ಗಂಟೆ 52 ನಿಮಿಷಕ್ಕೆ ಏರ್ ಇಂಡಿಯಾ AI807 ವಿಮಾನ ಟೇಕಾಫ್ ಆಗಿತ್ತು. ಸಂಜೆ 6 ಗಂಟೆ 12 ನಿಮಿಷದ ವೇಳೆ ವಿಮಾನದ ಎಸಿ ಯುನಿಟ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಏರ್ ಟ್ರಾಫಿಕ್ ಕಂಟ್ರೋಲರ್‌ಗೆ ಮಾಹಿತಿ ನೀಡಿದ ಪೈಲೆಟ್‌ಗಳು, ತುರ್ತು ಲ್ಯಾಂಡಿಂಗ್‌ಗೆ ಮನವಿ ಮಾಡಿದ್ದಾರೆ. ಬಳಿಕ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಅಧಿಕಾರಿಗಳು, ವಿಮಾನ ಲ್ಯಾಂಡಿಂಗ್ ಮಾಡಲು ಅವಕಾಶ ನೀಡಿದ್ದಾರೆ.
ಬಳಿಕ ಸಂಭವನೀಯ ಅನಾಹುತ ತಡೆಯಲು ಮೂರು ಅಗ್ನಿ ಶಾಮಕ ವಾಹನಗಳನ್ನು ಸಜ್ಜುಗೊಳಿಸಿದರು. ಸಂಜೆ 6 ಗಂಟೆ 40ನಿಮಿಷಕ್ಕೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ವಿಮಾನದಲ್ಲಿದ್ದ ಎಲ್ಲಾ 175 ಪ್ರಯಾಣಿಕರು ಸುರಕ್ಷಿತವಾಗಿದ್ದು, ಪರ್ಯಾಯ ವಿಮಾನದ ಮೂಲಕ ಬೆಂಗಳೂರಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಯಿತು.
ಏರ್ ಇಂಡಿಯಾ ವಿಮಾನದ ಎ.ಸಿ ಯೂನಿಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು 6.15ರ ಸುಮಾರಿಗೆ ಕರೆ ಬಂತು. ಕೂಡಲೇ ಮೂರು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿದವು. ವಿಮಾನವನ್ನು ಲ್ಯಾಂಡ್ ಮಾಡುತ್ತಲೇ ಕೂಲಂಕಷವಾಗಿ ಪರಿಶೀಲನೆ ನಡೆಸಲಾಯಿತು. ಲ್ಯಾಂಡ್ ಆಗುತ್ತಲೇ ಕೆಲ ಹೊತ್ತಿನಲ್ಲಿಯೇ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಸಲಾಯಿತು. ಅದೃಷ್ಟವಶಾತ್, ಯಾರಿಗೂ ತೊಂದರೆಯಾಗಿಲ್ಲ ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.