ಬೆಂಗಳೂರು, ಜನವರಿ 24: ಜನವರಿ 26 ಗಣರಾಜ್ಯೋತ್ಸವ (Republic Day) ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru) ಮಾಣಿಕ್ ಷಾ ಪರೇಡ್ ಮೈದಾನದಲ್ಲಿ (Manik Shah Parade Ground) ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜನವರಿ 26ರ ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಮಾತನಾಡಿ, ಈ ಭಾರಿ ಗಣರಾಜ್ಯೋತ್ಸವಕ್ಕೆ ಸಕಲ ತಯಾರಿಯಾಗಿದೆ. ಯಾವುದೇ ಸಮಸ್ಯೆಯಾಗದಂತೆ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಪೊಲೀಸ್ ಭದ್ರತೆ
8 ಮಂದಿ ಡಿಸಿಪಿ, 17 ಮಂದಿ ಎಸಿಪಿ, 44 ಮಂದಿ ಪಿಐ, 114 ಮಂದಿ ಪಿಎಸ್ಐ, 58 ಮಂದಿ ಎಎಸ್ಐ, 80 ಮಂದಿ ಸಿಬ್ಬಂದಿ, 30 ಜನ ಕ್ಯಾಮೆರಾ ಸಿಬ್ಬಂದಿ ಸೇರಿದಂತೆ ಒಟ್ಟು 1051 ಜನ ಅಧಿಕಾರಿಗಳು ಭದ್ರತೆಗೆ ಇರುತ್ತಾರೆ. ಬಂದೋಬಸ್ತ್ಗೆ 10 ಕೆಎಸ್ಆರ್ಪಿ ತುಕಡಿ, 2 ಅಗ್ನಿಶಾಮಕ ವಾಹನ, ಕ್ಷಿಪ್ರ ಕಾರ್ಯಾಚರಣೆ ತಂಡ ಇರುತ್ತದೆ. ಮೈದಾನದ ಸುತ್ತ 103 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.
ಪ್ರವೇಶ ದ್ವಾರಗಳ ವಿವರ
ಕಲರ್ ಕೋಡ್ಗಳ ಮೂಲಕ ಪಾಸ್ ವಿತರಿಸಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಪಿಂಕ್ ಬಣ್ಣದ ಪಾಸ್ ನೀಡಲಾಗುತ್ತದೆ. ವಿಐಪಿ ಪಾಸ್ ಗೇಟ್-2ರ ಮೂಲಕ ಪ್ರವೇಶಿಸಬಹುದಾಗಿದೆ. ಮುಖ್ಯ ಅತಿಥಿಗಳು, ಗಣ್ಯರು ಗೇಟ್-3 ಮೂಲಕ ಪ್ರವೇಶಿಸಬಹುದು. ಗೇಟ್-4ರಲ್ಲಿ ಬಿಳಿ ಪಾಸ್ ನೀಡಲಾಗುತ್ತದೆ, ಇಲ್ಲಿ ಮಾಧ್ಯಮದವರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.