ಪ್ರಸ್ತುತ ದಿನಮಾನಗಳಲ್ಲಿ ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಸೈ : ಡಾ. ಭಾರತಿ
ಬಳ್ಳಾರಿ.ಮಾ. 11:. ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯು ಇಂದು ಎಲ್ಲಾ ರಂಗದಲ್ಲಿಯೂ ಸಾಧನೆಯ ಮುನ್ನೆಡೆಯಿಂದ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾಳೆ. ಮಹಿಳೆಯರು ಆತ್ಮವಿಶ್ವಾಸ, ಧೈರ್ಯ ಮತ್ತು ತಾಳ್ಮೆಯಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಮೋಕಾ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಿ.ಭಾರತಿ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಮಹಿಳಾ ಸಬಲೀಕರಣ ಕೋಶದಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ,
ಇಂದು ಮಹಿಳೆಯರ ಮುಂದೆ ಅನೇಕ ಸವಾಲುಗಳಿವೆ.ಎಲ್ಲವುಗಳನ್ನು ನಿಭಾಯಿಸುವ ಸಹನಾ ಶಕ್ತಿಯೂ ಮಹಿಳೆಗಿದೆ.ಮಾಡುವ ಕಾರ್ಯಗಳಲ್ಲಿ ಶ್ರೇಷ್ಠ ಕನಿಷ್ಠ ಎಂದೆಣಿಸದೆ ಸಹಭಾಗಿತ್ವದಿಂದ ಮಹಿಳೆಯರು ಸದೃಢ ಸಮಾಜವನ್ನು ಕಟ್ಟಬೇಕೆಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮೋಕಾದ ಘನ ಮತ್ತು ದ್ರವ ತ್ಯಾಜ್ಯ ವಾಹನ ಚಾಲಕಿ ಕೆ.ಎ.ಕವಿತ ಅವರು ಮಾತನಾಡಿ, ಇಂದು ಮಹಿಳೆಯರು ಸಬಲರಾಗುತ್ತಿದ್ದಾರೆ.ತಮ್ಮ ಇಚ್ಛಾ ಶಕ್ತಿಯಿಂದ ಆರ್ಥಿಕ ಮತ್ತು ಸಾಮಾಜಿಕವಾಗಿಯೂ ಕುಟುಂಬವನ್ನು ಮುನ್ನೆಡೆಸುತ್ತಿದ್ದಾಳೆ.ಆತ್ಮಸ್ಥೆ ರ್ಯದೊಂದಿಗೆ ಹೆಜ್ಜೆ ಹಾಕಿದಾಗ ಖಂಡಿತ ಯಶಸ್ಸು ದೊರೆಯುವದು.ಯಾವ ಕೆಲಸವಾದರೂ ಶ್ರದ್ದೆ ಪ್ರಾಮಾಣಿಕತೆಯಿಂದ ಮಾಡುವ ಗುಣ ಮಹಿಳೆಯರಲ್ಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಸರೋಜಾ
ಸಮಾಜದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅನನ್ಯವಾಗಿದೆ.. ಪ್ರತಿಯೊಂದು ಹೆಜ್ಜೆಯಲ್ಲಿಯೂ ಮಹಿಳೆಯ ಶ್ರಮ ಮತ್ತು ತ್ಯಾಗವನ್ನು ಸಮಾಜ ಗೌರವಿಸಬೇಕು. ಪ್ರಾತಿನಿಧಿಕವಾಗಿ ಮಹಿಳೆಯರು ಪಾಲ್ಗೊಂಡರೆ ಸಾಲದು ಒಳಗೊಳ್ಳುವಿಕೆಯ ಮೂಲಕ ಉನ್ನತಿ ಸಾಧಿಸಬೇಕು ಮಹಿಳೆಯರಿಗೆ ಇಂದು ಎಲ್ಲಾ ಕ್ಷೇತ್ರದಲ್ಲೂ ಪ್ರಾಧಾನ್ಯತೆ ಸಿಗುತ್ತಿದೆ. ಹೆಣ್ಣುಮಕ್ಕಳು ಮತ್ತಷ್ಟು ಉನ್ನತ ಶಿಕ್ಷಣ ಪಡೆದು ತಮಗಿಷ್ಟವಾದ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.
ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕರಾದ ಡಾ.ಬಿ.ಜಿ.ಕಲಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿನಿಯರಾದ ಶ್ವೇತಾ,ಪೂಜಿತಾ ಹಾಗೂ ಸಂಗಡಿಗರು ಪ್ರಾರ್ಥಿಸಿ, ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು
ಅಧ್ಯಾಪಕರು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು.


