ಭುವನೇಶ್ವರ್ (ಒಡಿಶಾ): ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಉತ್ತರ ಒಡಿಶಾದ ಜಾಜ್ಪುರ್, ಭದ್ರಕ್ ಮತ್ತು ಬಾಲಸೋರ್ನಲ್ಲಿನ 170ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆಯಾಗಿದ್ದು, ಎರಡನೇ ದಿನ ಕೂಡ ಪ್ರವಾಹ ಮುಂದುವರೆದಿದೆ. ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿರುವ ಹಿನ್ನೆಲೆ ಇನ್ನೂ ಕೆಲವು ದಿನಗಳ ಕಾಲ ಕೂಡ ಭಾರಿ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮುನ್ಸೂಚನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಲಿಯಾಪಾಲ್, ಭೋಗ್ರೈ ಮತ್ತು ಜಲೇಶ್ವರ್ ಮೂರು ಬ್ಲಾಕ್ಗಳ ವ್ಯಾಪ್ತಿಯ 130 ಗ್ರಾಮಗಳು ಸುಬರ್ಣರೇಖಾ ನದಿಯ ನೀರಿನಿಂದ ಮುಳುಗಿದ್ದರೆ, ಜಾಜ್ಪುರದ ಸುಮಾರು 40ಕ್ಕೂ ಹೆಚ್ಚು ಗ್ರಾಮಗಳು ಬೈತರಾಣಿ ಪ್ರವಾಹದ ನೀರಿನಿಂದ ಮುಳುಗಿವೆ. ಭದ್ರಕ್ ಜಿಲ್ಲೆಯ ಧಮ್ನಗರ ಮತ್ತು ಭಂಡಾರಿಪೋಖರಿ ಬ್ಲಾಕ್ಗಳು ಸಹ ಪರಿಣಾಮ ಬೀರಿವೆ. ಕಿಯೋಂಝಾರ್ ಮತ್ತು ಸುಂದರ್ಗಢ ಜಿಲ್ಲೆಗಳ ಕೆಲವು ಗ್ರಾಮಗಳು ಸಹ ಪ್ರವಾಹಕ್ಕೆ ಸಿಲುಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.