ಆಧುನಿಕತೆಯ ಸೋಗಿನಲ್ಲಿ ನಮ್ಮ ಹಳ್ಳಿಗಳಲ್ಲಿ ಮೊದಲಿದ್ದ ವೈಭವ ಕಡಿಮೆಯಾಗುತ್ತಿದೆ. ವಿದ್ಯಾವಂತರೆಲ್ಲ ಪಟ್ಟಣ ಸೇರುತ್ತಿದ್ದಾರೆ. ಹೀಗಾಗಬಾರದು, ಯುವಕರು ಹಳ್ಳಿಗಳಲ್ಲೇ ಇದ್ದು ಕೆಲಸ ಮಾಡಬೇಕೆನ್ನುವ ಸಂದೇಶ ಇಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ ಸಂಭವಾಮಿ ಯುಗೇ ಯುಗೇ.
ರಾಜಲಕ್ಷ್ಮಿ ಎಂಟರ್‌ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ಅವರು ನಿರ್ಮಿಸಿರುವ, ಚೇತನ್ ಚಂದ್ರಶೇಖರ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರವು ಇದೇ ತಿಂಗಳು 21ರಂದು ಬಿಡುಗಡೆಯಾಗಲಿದೆ.
ಜಯ್ ಶೆಟ್ಟಿ – ನಿಶಾ ರಜಪೂತ್ ಹಾಗೂ ಮಧುರಾಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಮೈಸೂರಿಗೆ ಭೇಟಿಕೊಟ್ಟು ಮಾಧ್ಯಮಗಳ ಜೊತೆ ಮಾತನಾಡಿತು.
ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ, ನಾನು ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದು, ಸೋಷಿಯಲ್ ಕಂಟೆಂಟ್ ಇಟ್ಟುಕೊಂಡು ಈ ಚಿತ್ರ ನಿರ್ದೇಶನ ಮಾಡಿದ್ದೇನೆ. ಫ್ಯಾಮಿಲಿ ಆಡಿಯನ್ಸ್ ಕೂತು ನೋಡುವಂಥ ವಿಭಿನ್ನ ಕಮರ್ಷಿಯಲ್ ಕಾನ್ಸೆಪ್ಟ್ ಇದೆ” ಎಂದರು.
ನಾಯಕ ಜಯ್‌ಶೆಟ್ಟಿ “ಕೃಷಿ ಮತ್ತು ರೈತರ ಮೇಲೆ ಮಾಡಿದ ಚಿತ್ರವಿದು, ತನಗೆ ಆಶ್ರಯ ಕೊಟ್ಟ ಊರಿಗೆ ಏನಾದರೂ ಮಾಡಬೇಕು ಎಂದು ನಾಯಕ ಮುಂದಾಗುತ್ತಾನೆ. ಮುಂದೇನಾಗುತ್ತದೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್ ಎಂದರೆ,
ನಾಯಕಿ ನಿಶಾ ರಜಪೂತ್ “ನಾನು ಬಿಜಾಪುರದವಳಾದರೂ, ಬೆಳೆದಿದ್ದು ಮುಂಬೈನಲ್ಲಿ. ಕನ್ನಡದಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಈ ಚಿತ್ರದಲ್ಲಿ ಸ್ವಾತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ” ಎಂದು ಹೇಳಿದರು.
ನಾಯಕನ ತಂಗಿಯ ಪಾತ್ರ ಮಾಡಿರುವ ಮಧುರಾಗೌಡ “ಈ ಚಿತ್ರದಲ್ಲಿ ಸುಧಾರಾಣಿ ಅವರ ಮಗಳಾಗಿ ನಟಿಸಿದ್ದು ನನ್ನ ಅದೃಷ್ಟ” ಎಂದರೆ, ಕಲಾವಿದರಾದ ಬಲ ರಾಜವಾಡಿ, ಪುನೀತ್, ಅಶ್ವಿನ್‌ಹಾಸನ್ ತಮ್ಮ ಪಾತ್ರಗಳ ಕುರಿತು ತಿಳಿಸಿದರು. ಪೂರನ್ ಶೆಟ್ಟಿಗಾರ್ ಸಂಗೀತ ಹಾಗು ರಾಜು ಹೆಮ್ಮಿಗೆಪುರ ಛಾಯಾಗ್ರಹಣ ಚಿತ್ರಕ್ಕಿದೆ.