ಕಟ್ಟಿಮನಿ ಅವರ ಕಥೆಗಳಲ್ಲಿ ಗಾಢವಾದ ಜೀವನಾನುಭವ: ಶಿದ್ಲಿಂಗ ಗಾಳಿ

Ravi Talawar
ಕಟ್ಟಿಮನಿ ಅವರ ಕಥೆಗಳಲ್ಲಿ ಗಾಢವಾದ ಜೀವನಾನುಭವ: ಶಿದ್ಲಿಂಗ ಗಾಳಿ
WhatsApp Group Join Now
Telegram Group Join Now

ರಾಮದುರ್ಗ: ಪ್ರಗತಿಶೀಲ ಸಾಹಿತ್ಯ ಪಂಥದ ಪ್ರಮುಖ ಕಥೆಗಾರರಾದ ಬಸವರಾಜ ಕಟ್ಟಿಮನಿ ಅವರ ಕಥೆಗಳಲ್ಲಿ ಗಾಢವಾದ ಜೀವನಾನುಭವ, ಹಳೆಯ ಸಂಪ್ರದಾಯಕ್ಕೆ ಮನಿಯದೇ ಹೊಸದನ್ನು ಹುಟ್ಟು ಹಾಕುವ, ಸಮಾಜ ಸುಧಾರಣೆಯ ಧೀರತನದ ಮನೋಭಾವನೆಗಳು ಸ್ವಷ್ಟವಾಗಿ ಎದ್ದು ಕಾಣುತ್ತವೆ ಎಂದು ಯರಗಟ್ಟಿ ಸಿ.ಎಂ ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಶಿದ್ಲಿಂಗ ಗಾಳಿ ಹೇಳಿದರು.
ಪಟ್ಟಣ ಶ್ರೀಮತಿ ಐ.ಎಸ್. ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ಕನ್ನಡ ವಿಭಾಗ ಮತ್ತು ಬೆಳಗಾವಿ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಬುಧವಾರ ಜರುಗಿದ ಕಟ್ಟಿಮನಿ ಕಥಿ ಹೇಳೂಣು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಟ್ಟಿಮನಿ ಅವರ ಕಥೆಗಳಲ್ಲಿ ಖಡ್ಗದ ಹರಿತ, ಬೆಂಕಿಯಂಥ ಕಿಡಿಗಳು, ಮಿಂಚಿನಂಥ ಹೊಳಪು ಮತ್ತು ವಜ್ರದಂತ ಕಾಠಿಣ್ಯತೆಗಳನ್ನು ಕಾಣುತ್ತೇವೆ. ಕಟ್ಟಿಮನಿ ಅವರ ಕಥೆಗಳ ವಸ್ತುವಿನ ಆಯ್ಕೆಯಲ್ಲಿ ಸ್ಪಷ್ಟತೆ, ಖಚಿತವಾದ ಧೋರಣೆಗಳಿದ್ದು, ಸಣ್ಣ-ಸಣ್ಣ ಘಟನಾವಳಿಗಳನ್ನು ಅತ್ಯಂತ ಮಾರ್ಮಿಕವಾಗಿ ಸಮಾಜಮುಖಿಯಾಗಿ ಕಥೆಗಳನ್ನು ರಚಿಸುವ ಮೂಲಕ ಬಸವರಾಜ ಕಟ್ಟಿಮನಿ ಅವರು ಒಬ್ಬ ಶ್ರೇಷ್ಠ ಕಥೆಗಾರರಾಗಿ ಕನ್ನಡ ಸಾಹಿತ್ಯದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದರು.
ಕಾಲೇಜಿನ ಐಕ್ಯುಎಸಿ ಸಂಯೋಜಕ ಪ್ರೊ| ಸಂಜಯ ಹಾದಿಮನಿ ಮಾತನಾಡಿ, ಬಸವರಾಜ ಕಟ್ಟಿಮನಿಯವರ ಕಥೆಗಳು ಅತ್ಯಂತ ಸರಳವಾಗಿದ್ದು, ಬದುಕಿನ ಬದುಕಿನ ಬವಣೆಗಳನ್ನು ತುಂಬಾ ಮಾರ್ಮಿಕವಾಗಿ ತಿಳಿಸಿ ಕೊಡುತ್ತವೆ ಎಂದು ಹೇಳಿದರು.
ಪ್ರೊ. ಎಸ್.ಜಿ. ಚಿಕ್ಕನರಗುಂದ ಮಾತನಾಡಿದರು. ಪ್ರಾಚಾರ್ಯ ಡಾ.ಎಂ. ಡಿ. ಕಮತಗಿ ಅಧ್ಯಕ್ಷತೆ ವಹಿಸಿದ್ದರು. ಕಟ್ಟಿಮನಿ ಕಥಿ ಹೇಳೂಣು ಸ್ಪರ್ಧೆಯಲ್ಲಿ ಸುಮಾರು ೨೫ ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಅವರುಗಳಲ್ಲಿ ಅಜಯ ಬಿರಾದರ ಪಾಟೀಲ (ಪ್ರಥಮ), ರಕ್ಷಿತಾ ಕಾಳೆ (ದ್ವಿತೀಯ), ಶಿವಾನಂದ ಕಳ್ಳಿಮನಿ (ತೃತೀಯ ) ಹಾಗೂ ಪೂರ್ಣಿಮಾ ಶಿಪ್ರಿ ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿದ್ದು, ಬಹುಮಾನ ವಿಜೇತರಿಗೆ ಗಣ್ಯರು ಪ್ರಶಸ್ತಿ ಪತ್ರ ಹಾಗೂ ನಗದನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕ ಸಂಜಯ ಹಾದಿಮನಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಮ್. ಆರ್ ದೊಡ್ಡಮನಿ, ಡಾ. ವೆಂಕಟೇಶ, ಪರಶುರಾಮ ಮುಕಾರಿ, ಡಾ.ವೈ.ಎಸ್. ಹೊಸಮನಿ, ಯಲ್ಲಪ್ಪ ಕುರಿ, ಮಾರುತಿ ಸುಳಿಕೇರಿ, ಸೋಮೇಶ ಹೊಸಕೋಟಿ, ಡಾ| ಮಹಾಲಕ್ಷ್ಮಿ ಭೂಶಿ ಸೇರಿದಂತೆ ಕಾಲೇಜಿನ ಎಲ್ಲ ಪ್ರಾಧ್ಯಾಪಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಉಪನ್ಯಾಸಕ ಡಾ. ರಾಜು ಕಂಬಾರ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ.ಆರ್. ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃತಿಕಾ ಚಿಕ್ಕೊರಮಠ ಮತ್ತು ಪೂರ್ಣಿಮಾ ಶಿಪ್ರಿ ನಿರೂಪಿಸಿದರು. ಶಿವಲೀಲಾ ಹಡಪದ ವಂದಿಸಿದರು.

WhatsApp Group Join Now
Telegram Group Join Now
Share This Article