ವರದಿ : ಬಂಗಾರಪ್ಪ ಸಿ .
ಹನೂರು : ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಮನವೊಲಿಕೆಗೆ ತೆರಳಿದ್ದ ವೇಳೆ ಗ್ರಾಮದ ಕೆಲವರು ಮತಗಟ್ಟೆಯನ್ನೇ ಧ್ವಂಸ ಮಾಡಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಕೆಲ ಉದ್ರಿಕ್ತ ಜನರು ಇವಿಎಂ ಯಂತ್ರ, ಮತಗಟ್ಟೆಯ ಬಾಗಿಲು, ಮೇಜು- ಕುರ್ಚಿ, ಯಂತ್ರ ಇತರೆ ಪರಿಕರಗಳನ್ನು ಧ್ವಂಸ ಮಾಡಿದ್ದಾರೆ. ಈ ವೇಳೆ ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಇದೇ ವೇಳೆ ಕಲ್ಲು ತೂರಾಟವೂ ನಡೆದಿದೆ. ಈ ಘಟನೆ ವೇಳೆ ಗ್ರಾಮದ ಮಹಿಳೆಯರು ಸೇರಿ ಮತಗಟ್ಟೆಯ ಅಧಿಕಾರಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆಗೆ ಕಾರಣವೇನು: ಮಲೆ ಮಹದೇಶ್ವರ ಗ್ರಾಮ ಪಂಚಾಯಿತಿಗೆ ಸೇರಿದ ಇಂಡಿಗನತ್ತ, ಮೆಂದಾರೆ, ತುಳಿಸಿಕರೆ, ತೇಕಣೆ, ಪಡಸಲನತ್ತ ಸೇರಿ 5 ಗ್ರಾಮಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತ ಚಲಾವಣೆಯಿಂದ ಜನರು ದೂರ ಉಳಿದಿದ್ದರು.
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ತುಳಿಸಿಕರೆಯ 480 ಮತದಾರರು, ಇಂಡಿಗನತ್ತ ಪೋಡಿನ 528 ಮತದಾರರು, ಪಡಸಲನತ್ತ ಪೋಡಿನ 298 ನಿವಾಸಿಗಳು ಮತದಾನದಿಂದ ದೂರವಿದ್ದರು. ತಮಗೆ ಮೂಲ ಸೌಕರ್ಯ ಕೊಡಬೇಕು ಇಲ್ಲದಿದ್ದರೆ ತಾವು ಮತ ಹಾಕುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ವಿಚಾರ ಅರಿತ ಪೊಲೀಸ್ ಸಿಬ್ಬಂದಿ, ಚುನಾವಣಾ ಅಧಿಕಾರಿಗಳು ಮತದಾರರ ಮನವೊಲಿಸಲು ತೆರಳಿದ್ದರು. ಈ ವೇಳೆ, ಕೆಲವರನ್ನು ಮತದಾನಕ್ಕೆ ಮನವೊಲಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೆಲ ಜನರಿಂದ ಘಟನೆ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ.
ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.