ಧಾರವಾಡ: ಫೆಬ್ರವರಿ 22ರಿಂದ 25ರವರೆಗೆ ಧಾರವಾಡದ ಸೃಜನಾ ರಂಗಮಂದಿರದಲ್ಲಿ ನಿರ್ದಿಗಂತ ನಾಟಕೋತ್ಸವ ನಡೆಯಲಿದೆ ಎಂದ ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಾಟಕೋತ್ಸವದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ಧಾರವಾಡದಲ್ಲಿ ನಿರ್ದಿಗಂತ ನಾಟಕೋತ್ಸವ ನಡೆಯಲಿದೆ. ಇದು ನಿರ್ದಿಗಂತ ಉತ್ಸವ ಎಂದರು.
ಒಂದು ಕಾಲದಲ್ಲಿ ಉತ್ತರ ಕರ್ನಾಟಕದ ರಂಗಭೂಮಿ ವಿಜೃಂಭಿಸುತ್ತಿತ್ತು. ಈಗಲೂ ವಿಜೃಂಭಿಸುತ್ತಿದೆ. ಇತ್ತೀಚೆಗೆ ರಂಗಭೂಮಿ, ಸಿನಿಮಾ ಬೆಂಗಳೂರಿಗೆ ಕೇಂದ್ರೀಕೃತವಾಗಿವೆ. ರಂಗಭೂಮಿಯೇ ಬಹಳಷ್ಟು ಕಾಲ ಜೀವಂತವಾಗಿರುವಂತದ್ದು. ಇಲ್ಲಿ ಹೊಸ ಚೈತನ್ಯ ಕಟ್ಟುವ ಕೆಲಸ ಆಗಬೇಕು. ಅದಕ್ಕಾಗಿ ನಿರ್ದಿಗಂತ ಈ ಕೆಲಸ ಮಾಡುತ್ತಿದೆ ಎಂದರು.
ಒಂದು ಉತ್ಸವದ ವಾತಾವರಣ ಸೃಷ್ಟಿಯಾಗಬೇಕು. ಧಾರವಾಡದಲ್ಲಿ ಸ್ಥಳೀಯ ರಂಗಭೂಮಿಗೆ ಒತ್ತು ಕೊಡುತ್ತೇವೆ. ಉತ್ತರ ಕರ್ನಾಟಕದ 80 ಪ್ರತಿನಿಧಿಗಳು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಅನೇಕ ಸಾಹಿತಿಗಳು ಸಹ ಬರುತ್ತಾರೆ. ನಾಟಕದ ಜೊತೆಗೆ ಗೋಷ್ಠಿ, ಚರ್ಚೆಗಳೂ ನಡೆಯುತ್ತವೆ. ಈ ಭಾಗದ ಕಲಾವಿದರೂ ಇರುತ್ತಾರೆ. ಧಾರವಾಡದ ಉತ್ಸವದ ಬಳಿಕ ಮಂಗಳೂರಿನಲ್ಲೂ ಈ ಉತ್ಸವ ನಡೆಯಲಿದೆ. ನಮ್ಮ ಕಥೆ, ನಮ್ಮ ಹಾಡುಗಳನ್ನು ನಾವು ಸಂಭ್ರಮಿಸಬೇಕು. ಅದಕ್ಕಾಗಿ ಈ ಉತ್ಸವ ಆಯೋಜನೆ ಮಾಡಿದ್ದೇವೆ ಎಂದರು.