ಅಮರಾವತಿ ಜೂನ್ 22: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸರ್ಕಾರ ಗುಂಟೂರಿನ ತಾಡೆಪಲ್ಲಿಯಲ್ಲಿ ನಿರ್ಮಾಣ ಹಂತದಲ್ಲಿರುವ ವೈಎಸ್‌ಆರ್‌ಸಿಪಿ ಪಕ್ಷದ ಕೇಂದ್ರ ಕಚೇರಿಯನ್ನು ನೆಲಸಮಗೊಳಿಸಿದೆ ಎಂದು ಪಕ್ಷದ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಆರೋಪಿಸಿದ್ದಾರೆ.
ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ನೆಲಸಮ ಮಾಡಲಾಗಿದೆ ಎಂದು ರೆಡ್ಡಿ ಆರೋಪಿಸಿದ್ದು “ಚಂದ್ರಬಾಬು ಸೇಡಿನ ರಾಜಕೀಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ದರು. ಸರ್ವಾಧಿಕಾರಿಯಂತೆ, ಅವರು ವೈಎಸ್‌ಆರ್‌ಪಿಯ ಕೇಂದ್ರ ಕ ಚೇರಿಯನ್ನು ಅಗೆಯುವ ಯಂತ್ರಗಳು ಮತ್ತು ಬುಲ್ಡೋಜರ್‌ಗಳಿಂದ ಕೆಡವಿದರು, ಅದು ನೆಲಸಮವಾಗಿದೆ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.
ಹೈಕೋರ್ಟ್‌ನ ಆದೇಶವನ್ನು ಪಕ್ಷದ ವಕೀಲರೊಬ್ಬರು ಸಿಆರ್‌ಡಿಎ ಆಯುಕ್ತರಿಗೆ ತಲುಪಿಸಿದರು, ಆದರೆ ಪ್ರಾಧಿಕಾರವು ಇನ್ನೂ ಮುಂದುವರೆದು ಕಟ್ಟಡವನ್ನು ಕೆಡವಿತು. ಸಿಆರ್‌ಡಿಎನ ಕ್ರಮಗಳು ನ್ಯಾಯಾಲಯದ ನಿಂದನೆಯಾಗಿದೆ ಎಂದು ವೈಎಸ್‌ಆರ್‌ಸಿಪಿ ಹೇಳಿದೆ.
ತೆಲುಗು ದೇಶಂ ಪಕ್ಷ, ಬಿಜೆಪಿ ಮತ್ತು ಜನಸೇನಾ ಒಳಗೊಂಡಿರುವ ಎನ್‌ಡಿಎ ಸರ್ಕಾರದ ಅಡಿಯಲ್ಲಿ ಆಂಧ್ರಪ್ರದೇಶದಿಂದ ಕಾನೂನು ಮತ್ತು ನ್ಯಾಯವು ಸಂಪೂರ್ಣವಾಗಿ ಕಣ್ಮರೆಯಾಯಿತು ಎಂದು ರೆಡ್ಡಿ ಆರೋಪಿಸಿದ್ದು, ಮುಂದಿನ ಐದು ವರ್ಷಗಳ ಕಾಲ ರಾಜ್ಯದಲ್ಲಿ ನಾಯ್ಡು ಅವರ ಆಡಳಿತ ಹೇಗಿರುತ್ತದೆ ಎಂಬುದನ್ನು ಈ ಧ್ವಂಸವು ತೋರಿಸುತ್ತದೆ ಎಂದಿದ್ದಾರೆ.
ಇಂತಹ ಸೇಡಿನ ರಾಜಕಾರಣದಿಂದ ಪ್ರತಿಪಕ್ಷಗಳು ಹೆದರುವುದಿಲ್ಲ ಎಂದು ಹೇಳಿದ ವೈಎಸ್‌ಆರ್‌ಸಿಪಿ ಮುಖ್ಯಸ್ಥರು, ಜನರಿಗಾಗಿ ಹೋರಾಡುವುದಾಗಿ ಭರವಸೆ ನೀಡಿದರು.