ಬೀದರ.01.-ಬೀದರ ಜಿಲ್ಲೆಯಲ್ಲಿ ಆಗಸ್ಟ್ 27ರ ಬೆಳಿಗ್ಗೆ 8:30 ರಿಂದ 28ರ ಬೆಳಿಗ್ಗೆ 8:30 ವರೆಗೆ ಸರಾಸರಿ 59 ಎಂಎಂ ಮಳೆಯಾಗಿದೆ. 5.4 ಎಂಎಂ ಆಗಬೇಕಾಗಿದ್ದ ಮಳೆ ಪ್ರಮಾಣವು ಶೇ.992ರಷ್ಟು ಹೆಚ್ಚಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ತಾಲೂಕುವಾರು ಮಳೆಯ ವಿವರ ಇಂತಿದೆ. ಔರಾದ -98 ಎಂಎಂ , ಕಮಲನಗರ-84 ಎಂಎಂ, ಬೀದರ-70.84 ಎಂಎಂ, ಭಾಲ್ಕಿ-51ಎಂಎಂ, ಹುಮನಾಬಾದ-43 ಎಂಎಂ, ಬಸವಕಲ್ಯಾಣ-41 ಎಂಎಂ, ಹುಲಸೂರು-39ಎಂಎಂ, ಚಿಟಗುಪ್ಪಾ-27ಎಂಎಂ.
ಜಿಲ್ಲೆಯಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ 12442 ಹೆಕ್ಟೇರ್ ಪ್ರದೇಶದಲ್ಲಿನ ವಿವಿಧ ಬೆಳೆಗಳಿಗೆ ತೀವ್ರ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 5866 ಹೆಕ್ಟೇರ್ ಪ್ರದೇಶದ ಮತ್ತು ಸೋಯಾ ಮತ್ತು 3348 ಹೆಕ್ಟೇರ್ ಪ್ರದೇಶದ ತೊಗರಿ ಬೆಳೆ ಹೆಚ್ಚು ಹಾನಿಗೀಡಾಗಿದೆ. ಉಳಿದ ಬೆಳೆಗಳ ಹಾನಿ ವಿವರ ಹೆಕ್ಟೇರಿನಲ್ಲಿ ಇಂತಿದೆ. ಹೆಸರು-2125, ಉದ್ದು-1043 ಮತ್ತು ಹತ್ತಿ-60. ತಾಲೂಕುವಾರು ಬೆಳೆ ಹಾನಿಯ ವಿವರ ಹೆಕ್ಟೇರ್ ಗಳಲ್ಲಿ ಇಂತಿದೆ. ಔರಾದ-4960, ಕಮಲನಗರ-4802, ಬೀದರ-480, ಹುಮನಾಬಾದ-600, ಚಿಟಗುಪ್ಪ-300, ಭಾಲ್ಕಿ-1000, ಬಸವಕಲ್ಯಾಣ-250 ಮತ್ತು ಹುಲಸೂರು-50. ಮಳೆ ಮತ್ತು ಪ್ರವಾಹದಿಂದ ಹಾನಿಗೀಡಾದ ಸಣ್ಣ ಮತ್ತು ಅತೀ ಸಣ್ಣ ರೈತರ ಪ್ರತಿ ಹೆಕ್ಟೇರಿಗೆ 8500 ರೂ. ದಂತೆ 930.74 ಲಕ್ಷ ರೂ. ಮತ್ತು ದೊಡ್ಡ ರೈತರ ಪ್ರತಿ ಹೆಕ್ಟೇರಿಗೆ 8500 ರೂಂ.ದಂತೆ 154.53 ಲಕ್ಷ ರೂ. ಪರಿಹಾರ ಸೇರಿದಂತೆ ಒಟ್ಟು 10.85 ಕೋಟಿ ರೂ. ಪರಿಹಾರದ ನೆರವನ್ನು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಭಾರೀ ಮಳೆಯಿಂದ ಜಿಲ್ಲೆಯ ಚುಳಕಿನಾಲಾ, ನಾರಂಜಾ ಇತರೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಭಾಲ್ಕಿ ತಾಲೂಕಿನ ಗೋರ ಚಿಂಚೋಳಿ ಗ್ರಾಮದ ಬಳಿಯ ಸೇತುವೆ ಮೇಲೆ ಚುಳುಕಿ ನಾಲಾ ನೀರು ಮತ್ತು ಇಂಚೂರು ಗ್ರಾಮ ಸಮೀಪದ ನಾರಂಜಾ ಸೇತುವೆ ಮೇಲಿನಿಂದ ನಾರಂಜಾ ನೀರು ಹರಿಯುತ್ತಿದೆ. ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ತಿಳಿಸಿದೆ.