ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರಖಾನೆ ನಿ, ಮು.ಖಾ. ಹುಬ್ಬಳ್ಳಿ, ಈ ಕಾರ್ಖಾನೆಯಲ್ಲಿ ಆಡಳಿತ ಮಂಡಳಿಯ ನಿರ್ದೆಶಕನಾಗಿ ಅಶೋಕ ಯಮಕನಮರಡಿ ಇವರು ಆಯ್ಕೆಯಾದ ಕೆಲವೇ ತಿಂಗಳುಗಳಲ್ಲಿ ರಾಜಿನಾಮೆ ನೀಡಿರುತ್ತಾರೆ. ಆದರೆ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು ಸೇರಿ ಸಹಕಾರ ಸಂಘದ ನಿಯಮಾವಳಿ ಪ್ರಕಾರ ಚುನಾವಣೆ ನಡೆಸದೇ ಮೋಹನ ಸಂಬರಗಿ ಇವರನ್ನು ಕೋ-ಅಪ್ಪ ಮಾಡಿ ನಿರ್ದೇಶಕರನ್ನಾಗಿ ನೇಮಕ ಮಾಡಿರುತ್ತಾರೆ.
ಅದು ಅಲ್ಲದೇ ಅವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಿರುತ್ತಾರೆ. ಆದರೆ ಸಹಕಾರಿ ಸಂಘದ ಚುನಾವಣೆ ನಿಯಮಾವಳಿ ಪ್ರಕಾರ ” ಒಂದು ಆಡಳಿತ ನಿರ್ದೇಶಕನ ಪದದಲ್ಲಿನ ಯಾವುದೇ ಸ್ಥಾನವು ಖಾಲಿ ಉಂಟಾದಲ್ಲಿ ನಿರ್ದೇಶಕನ ಉಳಿದ ಪದಾವಧಿಯು ಅವರ ಮೂಲ ಅವಧಿಯ ಅರ್ಧಕ್ಕಿಂತ ಕಡಿಮೆ ಇದ್ದರೆ ಮಂಡಳಿಯ ಯಾವ ಗುಂಪಿನ ನಿರ್ದೇಶಕರ ಸ್ಥಾನ ಖಾಲಿಯಾಯಿತೋ ಅದೇ ಗುಂಪಿನ ಅರ್ಹರಾದ ಒಬ್ಬರನ್ನು ಉಳಿದ ಅವಧಿಗೆ * ಕೋಆಫ್ಟ್ ಮಾಡಿಕೊಳ್ಳತಕ್ಕದ್ದು. ಆದರೆ ಅದರ ಮೂಲ ಅವಧಿಯು ಅರ್ಧಕ್ಕಿಂತ ಹೆಚ್ಚು ಇದ್ದರೆ ಸಹಕಾರ ಚುನಾವಣೆ ಪ್ರಾಧಿಕಾರವು ಚುನಾವಣೆಯನ್ನು ಜರುಗಿಸಿ ಆ ಸ್ಥಾನವನ್ನು ಭರ್ತಿ ಮಾಡತಕ್ಕದ್ದು ” ಎಂಬ ನಿಯಮಾವಳಿ ಇರುತ್ತದೆ.
ಆದರೆ ಈ ಮೇಲಿನ ನಿಯಮಾವಳಿಯನ್ನು ಗಾಳಿಗೆ ತೂರಿ ಸದರಿ ಕಾರ್ಖಾನೆಯ ನಿರ್ದೇಶಕ ಸ್ಥಾನಕ್ಕೆ ಮೋಹನ ಸಂಬರಗಿ ಇವರನ್ನು ಕೋ-ಅಪ್ಪ ಮಾಡಿ ನಿರ್ದೇಶಕರನ್ನಾಗಿ ನೇಮಕ ಮಾಡಿರುತ್ತಾರೆ. ಹೀಗಾಗಿ ಈ ಹಿಂದೆಯೂ ಸಹ ಸದರಿಯವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವುದರಿಂದ ಆಡಳಿತ ಮಂಡಳಿ ಜೊತೆಗೂಡಿ ಭ್ರಷ್ಟಾಚಾರ ಮಾಡುತ್ತಾರೆಂದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಆದ ಕಾರಣ ಮಾನ್ಯರವರು ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ರೈತರಿಗೆ ಹಾಗೂ ಸಹಕಾರ ಕ್ಷೇತ್ರದ ಹಿತದೃಷ್ಟಿಯಿಂದ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಸಹಕಾರ ಕ್ಷೇತ್ರದ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಬೇಕೆಂದು ಸಮಾಜ ಸೇವಕ ವಿವೇಕ ತಡಕೊಡ ಮುಖ್ಯಮಂತ್ರಿ ಹಾಗೂ ಸಹಕಾರ ಸಚಿವರಿಗೆ ದೂರು ಸಲ್ಲಿಸಿದ್ದಾರೆ.