ವೃಕ್ಷ ರಕ್ಷಿಸಿದರೆ, ವೃಕ್ಷವೇ ನಮ್ಮನ್ನು ರಕ್ಷಿಸುತ್ತದೆ: ಈಶ್ವರ ಖಂಡ್ರೆ

Ravi Talawar
ವೃಕ್ಷ ರಕ್ಷಿಸಿದರೆ, ವೃಕ್ಷವೇ ನಮ್ಮನ್ನು ರಕ್ಷಿಸುತ್ತದೆ: ಈಶ್ವರ ಖಂಡ್ರೆ
WhatsApp Group Join Now
Telegram Group Join Now

• ವೃಕ್ಷಮಾತೆ ಸಾಲುಮರದ ತಿಮ್ಮಕ್ಕ 113ನೇ ಜನ್ಮ ದಿನ ಕಾರ್ಯಕ್ರಮ

ಬೆಂಗಳೂರು, ಸೆ.26: ವೃಕ್ಷೋ ರಕ್ಷತಿ ರಕ್ಷಿತಃ. ಯಾರು ಮರ ಗಿಡಗಳನ್ನು ರಕ್ಷಿಸುತ್ತಾರೋ.. ಅವರನ್ನು ಮರ ಗಿಡಗಳೇ ರಕ್ಷಿಸುತ್ತವೆ. ಇದಕ್ಕೆ ರಾಜ್ಯದ ಹೆಮ್ಮೆಯ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರೇ ನಿದರ್ಶನ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ತಿಮ್ಮಕ್ಕನವರ 113ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು, ಮಾಗಡಿ ತಾಲೂಕಿನ ಹುಲಿಕಲ್ ನಿಂದ ಕುದೂರು ನಡುವೆ ರಾಜ್ಯ ಹೆದ್ದಾರಿ 94ರಲ್ಲಿ ಸಾಲು ಸಾಲು 8000 ಸಸಿಗಳನ್ನು ನೆಟ್ಟು, ಬಹುದೂರದಿಂದ ಬಂದಿಗೆಯಲ್ಲಿ ನೀರು ಹೊತ್ತು ತಂದು ಬೆಳೆಸಿದ್ದು, ಇಡೀ ಜಗತ್ತಿಗೇ ಮಾದರಿಯಾಗಿದ್ದಾರೆ ಎಂದರು.

ತಿಮ್ಮಕ್ಕನವರ ಜೀವನ ಆಧರಿಸಿ ಪ್ರೌಢ ಪ್ರಬಂಧ ಬರೆದು ಡಾಕ್ಟರೇಟ್ ಪಡೆದವರಿದ್ದಾರೆ, ಈ ಮಹಾತಾಯಿಯ ಆದರ್ಶ ಪಾಲಿಸಿ ತಮ್ಮೂರಿನಲ್ಲೂ ಸಾಲು ಮರ ನೆಟ್ಟು ಬೆಳೆಸಿದವರಿದ್ದಾರೆ. 2016 ರಲ್ಲಿ, ಬಿಬಿಸಿ ನಡೆಸಿದ ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ನಮ್ಮ ವೃಕ್ಷಮಾತೆ ತಿಮ್ಮಕ್ಕ ಅವರೂ ಸ್ಥಾನ ಪಡೆದಿದ್ದರು ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ಎಂದು ಹೇಳಿದರು.

ಭಾರತ ಸರ್ಕಾರ ತಿಮ್ಮಕ್ಕನವರ ಪರಿಸರ ಕಾಳಜಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌವರಿಸಿದ್ದರೆ, ಕರ್ನಾಟಕ ಸರ್ಕಾರವು ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನವನ್ನು ನೀಡಿ, ಅವರನ್ನು ಪರಿಸರ ರಾಯಭಾರಿಯಾಗಿ ನೇಮಕ ಮಾಡಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ತಾಯಿ ತಿಮ್ಮಕ್ಕ ಅವರಿಗಿರುವ ಪರಿಸರ ಕಾಳಜಿ, ಪರಿಸರದ ಬಗ್ಗೆ ಅವರಿಗಿರುವ ಪ್ರೀತಿ, ಮರಗಳ ಬಗ್ಗೆ ಅವರಿಗಿರುವ ಮಮಕಾರ ಇಂದು ಅವರನ್ನು ರಕ್ಷಿಸುತ್ತಿದೆ. ಮರಗಳೊಂದಿಗೆ ಸತತ ಸಂಪರ್ಕ ಇರುವುದರಿಂದಲೇ ಅವರು ಶುದ್ಧ ಆಮ್ಲಜನಕ ಸೇವಿಸಿ ಇಷ್ಟು ಆರೋಗ್ಯಪೂರ್ಣವಾಗಿ ದೀರ್ಘಾಯುಷ್ಯ ಪಡೆದಿದ್ದಾರೆ ಇನ್ನೂ ದೀರ್ಘ ಕಾಲ ಅವರು ಬಾಳಲಿ, ಬದುಕಲಿ ನಮಗೆಲ್ಲರಿಗೂ ಮಾರ್ಗದರ್ಶನ ಮಾಡುತ್ತಿರಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಜಗತ್ತಿಗೆ ತಾಪಮಾನದ ಸವಾಲು:

ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯ ಇಂದು ವಿಶ್ವಕ್ಕೆ ದೊಡ್ಡ ಸವಾಲಾಗಿದೆ. ಒಂದು ವರ್ಷದಲ್ಲಿ ಬೀಳುವ ಮಳೆ ಒಂದು ತಿಂಗಳಲ್ಲಿ ಬೀಳುತ್ತದೆ. ಒಂದು ತಿಂಗಳಲ್ಲಿ ಬೀಳುವ ಮಳೆ 1 ವಾರದಲ್ಲಿ ಬೀಳುತ್ತಿದೆ. 1 ವಾರವಿಡೀ ಸುರಿಯುವ ಮಳೆ ಒಂದು ಗಂಟೆಯಲ್ಲಿ ಬೀಳುತ್ತಿದೆ. ಇದರಿಂದ ಪ್ರವಾಹ ಪರಿಸ್ಥಿತಿ ತಲೆದೋರಿದರೆ, ಕೆಲವು ಕಡೆ ಮಳೆಯೇ ಆಗುತ್ತಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ವಿಪರೀತ ಬಿಸಿಲು ಏರುತ್ತಿದೆ. ಇಂತಹ ಅನಾಹುತ ತಪ್ಪಬೇಕಾದರೆ ವೃಕ್ಷಗಳ ಸಂಖ್ಯೆ ಹೆಚ್ಚಳವಾಗಬೇಕು. ನಾವು ನೀವೆಲ್ಲರೂ ಸಾಲು ಮರದ ತಿಮ್ಮಕ್ಕ ಅವರ ಆದರ್ಶ ಪಾಲಿಸಿ ಅವರಂತೆ ನಾವೂ ಸಸಿ ನೆಟ್ಟು ಪ್ರೀತಿಯಿಂದ ಬೆಳೆಸಬೇಕು ಎಂದು ಈಶ್ವರ ಖಂಡ್ರೆ ತಿಳಿಸಿದರು.

ಸಾಧನೆ ಮಾಡಲು, ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಲು ಯಾವುದೇ ಪದವಿ, ಸ್ಥಾನಮಾನದ ಅಗತ್ಯವಿಲ್ಲ. ಕಾಯಕನಿಷ್ಠೆ ಇಟ್ಟುಕೊಂಡು ಎಲ್ಲರಿಗೂ ಒಳ್ಳೆಯದು ಮಾಡಬೇಕು ಎಂಬ ಧ್ಯೇಯ ಇದ್ದರೆ ಜಗತ್ತನ್ನೆ ಬದಲಾವಣೆ ಮಾಡುವ ಶಕ್ತಿ ಬರುತ್ತದೆ ಎಂಬುದನ್ನು ತಿಮ್ಮಕ್ಕ ಸಾಬೀತು ಪಡಿಸಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು.

ನೂರಾರು ಅಭಿಮಾನಿಗಳು ಶತಾಯುಷಿ ತಿಮ್ಮಕ್ಕನವನ್ನು ಗೌರವಿಸಿದರು.

WhatsApp Group Join Now
Telegram Group Join Now
Share This Article