ಖಾನಾಪುರ: ಗ್ರಾಮ ಪಂಚಾಯಿತಿಗಳು ಸಬಲೀಕರಣಗೊಂಡಾಗ ನಿಜವಾದ ಗ್ರಾಮಸ್ವರಾಜ್ ಸಾಧ್ಯ ಹಾಗಾಗಿ ಕಾಂಗ್ರೆಸ್ ಸರಕಾರ ಅಧಿಕಾರ ವಿಕೇಂದ್ರೀಕರಣ ಮತ್ತು ಸ್ಥಳೀಯಾಡಳಿತಗಳಿಗೆ ಬಲತುಂಬುವ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಬೆಳಗಾವಿ ತಾಲೂಕ ಪಂಚಾಯತ, ಖಾನಾಪುರ ಹಾಗೂ ಗ್ರಾಮ ಪಂಚಾಯಿತಿ ಬಿಜಗರ್ಣಿ ಇವರ ಸಂಯುಕ್ತ ಆಶ್ರಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಲಾದ ಬಿಜಗರ್ಣಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ, ಡಿಜಿಟಲ್ ಗ್ರಂಥಾಲಯ ಹಾಗೂ ಸಂಜೀವಿನಿ ಶೆಡ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜೀವ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಅಧಿಕಾರ ವಿಕೇಂದ್ರೀಕರಣ ಜಾರಿಗೆ ತಂದರು. ಮನಮೋಹನ ಸಿಂಗ್ ಅವರು ಪ್ರಧಾನಿಯಿದ್ದಾಗ ನರೇಗಾ ಯೋಜನೆ ಜಾರಿಗೊಳಿಸಿ ಗ್ರಾಮ ಪಂಚಾಯಿತಿಗಳಿಗೆ ಬಲ ತುಂಬಿದರು. ಅಲ್ಲಿಯವರೆಗೆ ಗ್ರಾಮ ಪಂಚಾಯಿತಿಗಳಲ್ಲಿ ವಿದ್ಯುತ್ ಬಿಲ್ ತುಂಬಲು ಸಹ ಹಣವಿರುತ್ತಿರಲಿಲ್ಲ. ಈಗ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಮಹತ್ವ ಬಂದಿದ್ದು, ಸರಕಾರದ ಯೋಜನೆಗಳು ಗ್ರಾಮಸಭೆಗಳ ಮೂಲಕವೇ ಜಾರಿಯಾಗಬೇಕೆನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಈ ವೇಳೆ ಶಾಸಕರಾದ ವಿಠ್ಠಲ ಹಲಗೇಕರ್, ತಾಲೂಕಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ರಮೇಶ್ ಮೆತ್ರಿ, ಪಂಚಾಯತ್ ಅಭಿವೃದ್ಧಿ ಅಧಿಜಾರಿ ಯಲ್ಲಪ್ಪ ಭಜಂತ್ರಿ, ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.