ಕಲಬುರಗಿ: ಅತಿವೃಷ್ಟಿಯಿಂದಾಗಿ ನಾನು ಬೆಳೆದಿದ್ದ ಬೆಳೆ ಹಾಳಾಗಿದೆ ಎಂದು ತನ್ನ ಕಷ್ಟವನ್ನು ಹೇಳಿಕೊಳ್ಳಲು ಬಂದಿದ್ದ ಯುವ ರೈತನ ಮೇಲೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಕಲಬುರಗಿಯ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಬಂದಿದ್ದ ಯುವಕ ಅತಿವೃಷ್ಟಿಯಿಂದ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ತೊರಗಿ ಬೆಳೆ ಹಾಳಾಗಿದೆ ಸರ್ ಎಂದು ಅಲವತ್ತುಕೊಂಡಿದ್ದ.
ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಯುವಕನಿಗೆ, ನೀನು ಎಷ್ಟು ಎಕರೆಯಲ್ಲಿ ಬೆಳೆ ಬೆಳೆದಿದ್ದೀಯಾ ಎಂದು ಪ್ರಶ್ನಿಸಿದ್ದರು. ಅದಕ್ಕೆ ಯುವಕ ನಾಲ್ಕು ಎಕರೆಯಲ್ಲಿ ಬೆಳೆ ಬೆಳೆದಿದ್ದೆ ಎಂದು ಉತ್ತರಿಸಿದ್ದ. ಇದಕ್ಕೆ ಖರ್ಗೆಯವರು, ನನ್ನದು ನಲವತ್ತು ಎಕರೆಯಲ್ಲಿ ಬೆಳೆದಿದ್ದು ಹಾಳಾಗಿದೆ. ತೊಗರಿ ಮಾತ್ರವಲ್ಲ, ಹೆಸರು, ಹತ್ತಿ, ಸೂರ್ಯಕಾಂತಿ ಸಹ ಹಾಳಾಗಿದೆ. ನಾನು ಯಾರಿಗೆ ಹೋಗಿ ಹೇಳಲಿ. ನೀನು ಬೇಕಿದ್ದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಹತ್ತಿರ ಹೋಗಿ ಕೇಳು. ಇಲ್ಲಿ ಬಂದು ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸ ಮಾಡಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.