ಹಾಗಾದರೆ ರಾಜ್ಯದಿಂದ ಪಿಎಂ ಸ್ಥಾನದ ಅರ್ಹರು, ಆಕಾಂಕ್ಷಿಗಳು ಕಾಂಗ್ರೆಸ್ನಲ್ಲಿ ಯಾರು ಇಲ್ಲವೇ? ಸ್ವತಃ ಎಐಸಿಸಿ ಅಧ್ಯಕ್ಷರೇ ಇದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಬಾರಿ ಕಾಂಗ್ರೆಸ್ ಲೋಕಸಭಾ ಚುನಾವಣೆ ಎದುರಿಸಿದೆ. ಕಾಂಗ್ರೆಸ್ ಒಕ್ಕೂಟ ಅಧಿಕ ಸ್ಥಾನ ಗೆದ್ದರೆ ಪಿಎಂ ರೇಸ್ನಲ್ಲಿ ಖರ್ಗೆಯೂ ಪರಿಗಣನೆಗೆ ಒಳಗಾಗುವವರೇ. ರೇಸ್ನಲ್ಲಿ ನಾನಿಲ್ಲ ಎಂದು ಅವರು ಹೇಳಿಲ್ಲ. ಆದರೆ ರಾಹುಲ್ ಗಾಂಧಿಯವರನ್ನು ಓವರ್ಟೇಕ್ ಮಾಡಿ ಮುಂದೆ ಹೋಗಲು ಸ್ವತಃ ಖರ್ಗೆಯವರೇ ತಯಾರಿಲ್ಲ.
ಇನ್ನು ಸಿದ್ದರಾಮಯ್ಯ. ಸ್ವತಃ ಅವರು ರಾಜ್ಯದ ರಾಜಕಾರಣ ಬಿಟ್ಟು ಹೋಗಲು ತಯಾರಿಲ್ಲ. ಬೇರೆ ರಾಜ್ಯಗಳಿಗೆ ಚುನಾವಣಾ ಪ್ರಚಾರಕ್ಕೆ ಹೋಗುವುದು ಕೂಡ ನನ್ನಿಂದ ಸಾಧ್ಯವಿಲ್ಲ ಎಂದು ಅವರು ಇತ್ತೀಚೆಗೆ ಹೇಳಿದ್ದರು. ಸ್ವತಃ ರಾಜ್ಯದ ಕಾಂಗ್ರೆಸ್ ನಾಯಕತ್ವವನ್ನು ಗಟ್ಟಿಯಾಗಿ ಹಿಡಿದಿರುವ ಸಿದ್ದರಾಮಯ್ಯ, ಅದನ್ನು ಸುತರಾಂ ಬಿಟ್ಟುಕೊಡಲು ಸಿದ್ಧರಿಲ್ಲ. ಇದನ್ನೇ ಅವರು ʼನಾನು ಪಿಎಂ ಸ್ಥಾನ ಆಕಾಂಕ್ಷಿಯಲ್ಲʼ ಎನ್ನುವ ಮೂಲಕ ತಿಳಿಸಿದ್ದಾರೆ.
ಸಿದ್ದು ಹೇಳಿಕೆ ಮಲ್ಲಿಕಾರ್ಜುನ ಖರ್ಗೆಯವರಿಗೆ ನೀಡಿದ ಚೆಕ್ಮೇಟ್ ಕೂಡ ಎಂದು ವಿಶ್ಲೇಷಿಸಲಾಗುತ್ತಿದೆ. ಪಿಎಂ ಸ್ಥಾನಕ್ಕೆ ಹೋಗಬಹುದಾದ ಖರ್ಗೆಯವರನ್ನು ಹೆಸರಿಸಿ, ಆ ಮೂಲಕ ಇನ್ನೊಂದು ಶಕ್ತಿ ಕೇಂದ್ರವನ್ನು ಪಕ್ಷದೊಳಗೆ ಬೆಂಬಲಿಸಲು ಸಿದ್ದು ಸಿದ್ಧರಿಲ್ಲ. ಹಾಗೆಯೇ ಅವರು ಈ ಮಾತು ರಾಹುಲ್ ಗಾಂಧಿಗೆ ಬೆಂಬಲ ಕೂಡ ಇರಬಹುದು ಅಂತಿದಾರೆ ವಿಶ್ಲೇಷಕರು. ಯಾಕೆಂದರೆ ಸದ್ಯ ಕಾಂಗ್ರೆಸ್ನಲ್ಲಿ ರಾಷ್ಟ್ರಮಟ್ಟದ ಹಲವು ನಾಯಕರು ರಾಹುಲ್ ಅವರನ್ನೇ ಬೆಂಬಲಿಸುತ್ತಿದ್ದಾರೆ.