ನವದೆಹಲಿ, ಮೇ. 14 : 2024 ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮೂರನೇ ಬಾರಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಲು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಒಡಕು ಮೂಡಿಸುತ್ತಿದ್ದಾರೆ ಎಂಬ ಆರೋಪ ಪ್ರಧಾನಿ ನರೇಂದ್ರ ಮೋದಿ ಮೇಲಿದೆ. ಇದರ ಬೆನ್ನಲ್ಲೇ ಮೋದಿ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.
“ನಾನು ಹಿಂದೂ-ಮುಸ್ಲಿಂ ರಾಜಕೀಯ ಮಾಡುವ ದಿನ, ನಾನು ಸಾರ್ವಜನಿಕ ಜೀವನಕ್ಕೆ ಅನರ್ಹನಾಗುತ್ತೇನೆ. ಇದು ನನ್ನ ಸಂಕಲ್ಪ. ನಾನು ಯಾವತ್ತೂ ಹಿಂದೂ-ಮುಸ್ಲಿಂ ರಾಜಕಾರಣ ಮಾಡುವುದಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇತ್ತೀಚೆಗೆ ಚುನಾವಣಾ ಪ್ರಚಾರಗಳಲ್ಲಿ ಹಲವು ಬಾರಿ ಪ್ರಧಾನಿ ಕಾಂಗ್ರೆಸ್ ಅನ್ನು ಟೀಕಿಸುವ ಭರದಲ್ಲಿ ಮುಸ್ಲಿಂ ಸಮುದಾಯವನ್ನು ಅವಮಾನಿಸಿದ್ದಾರೆ. ಇವುಗಳ ಬಗ್ಗೆ ಪ್ರಶ್ನೆ ಬಂದಾಗ ತಾವು ಅಂತಹ ರಾಜಕಾರಣ ಮಾಡಿಲ್ಲ ಎಂದಿದ್ದಾರೆ.
ವಾರಣಾಸಿ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಲೋಕಸಭೆಗೆ ಸ್ಪರ್ಧಿಸಲು ಬಯಸಿ ನಾಮಪತ್ರ ಸಲ್ಲಿಸಿದ ದಿನವೇ ವಾರಣಾಸಿಯಲ್ಲಿ ಸಂದರ್ಶನ ನೀಡಿದ್ದಾರೆ. ಖಾಸಗಿ ಚಾನೆಲ್‌ಗೆ ಎನೀಡಿದ ಸಂದರ್ಶನದಲ್ಲಿ ಮೋದಿ ತಾವು ಹಿಂದೂ ಮುಸ್ಲಿಂ ರಾಜಕಾರಣ ಮಾಡಿಲ್ಲ… ಮಾಡಲ್ಲ ಎಂದು ಹೇಳಿಕೆಗಳನ್ನು ನೀಡಿದ್ದಾರೆ. ಇವುಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.