ನವದೆಹಲಿ, ನವೆಂಬರ್ 8: ತನ್ನನ್ನು ಬಿಸಿನೆಸ್ ವಿರೋಧಿ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಆದರೆ, ತಾನು ಬಿಸಿನೆಸ್ ವಿರೋಧಿಯಲ್ಲ. ಆದರೆ, ಆರ್ಥಿಕ ಶಕ್ತಿಯ ಕೇಂದ್ರೀಕರಣದ ವಿರೋಧಿ, ಬಿಸಿನೆಸ್ ಏಕಸ್ವಾಮ್ಯದ ವಿರೋಧಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಕೆಲವೇ ಉದ್ಯಮಿಗಳನ್ನು ಪ್ರೋತ್ಸಾಹಿಸುತ್ತದೆ ಎಂಬುದು ರಾಹುಲ್ ಗಾಂಧಿ ಸದಾ ಮಾಡುತ್ತಿರುವ ಆರೋಪ. ಆದರೆ, ಗೌತಮ್ ಅದಾನಿ, ಮುಕೇಶ್ ಅಂಬಾನಿ ಅವರತ್ತ ರಾಹುಲ್ ಆಗಾಗ್ಗೆ ಬೊಟ್ಟು ಮಾಡುತ್ತಲೇ ಇರುತ್ತಾರೆ. ಸಂಪತ್ತು ಮರುಹಂಚಿಕೆ ಬಗ್ಗೆ ಮಾತನಾಡುತ್ತಿರುತ್ತಾರೆ. ಅಂತೆಯೇ, ರಾಹುಲ್ ಗಾಂಧಿ ಉದ್ಯಮ ಮತ್ತು ಉದ್ಯಮಿಗಳ ವಿರೋಧಿ ಎನ್ನುವಂತಹ ಟೀಕೆಗಳೂ ಸಾಕಷ್ಟು ಕೇಳಿಬರುತ್ತಲೇ ಇವೆ. ಈ ಕಾರಣಕ್ಕೆ ರಾಹುಲ್ ಗಾಂಧಿ ನಿನ್ನೆ ವಿಡಿಯೋ ಸಂದೇಶವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದು, ತಾನು ಬಿಸಿನೆಸ್ ವಿರೋಧಿ ಅಲ್ಲ ಎಂದು ಸ್ಪಷ್ಟಪಡಿಸುವ ಪ್ರಯತ್ನ ಮಾಡಿದ್ದಾರೆ.
ನಾನು ಆರ್ಥಿಕ ಶಕ್ತಿ ಕೇಂದ್ರೀಕರಣದ ವಿರೋಧಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
‘ಬಿಜೆಪಿಯಲ್ಲಿರುವ ನನ್ನ ವಿರೋಧಿಗಳು ನನ್ನನ್ನು ಬಿಸಿನೆಸ್ ವಿರೋಧಿ ಎಂಬಂತೆ ಬಿಂಬಿಸುತ್ತಿದ್ದಾರೆ. ನಾನು ಬಿಸಿನೆಸ್ ವಿರೋಧಿಯಲ್ಲ. ಆದರೆ, ಏಕಸ್ವಾಮ್ಯತೆಯನ್ನು ವಿರೋಧಿಸುತ್ತೇನೆ. ಕೆಲವೇ ಉದ್ಯಮಿಗಳ ಪ್ರಾಬಲ್ಯವನ್ನು ವಿರೋಧಿಸುತ್ತೇನೆ. ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿ ನಾನು ವೃತ್ತಿ ಆರಂಭಿಸಿದೆ. ಬಿಸಿನೆಸ್ ಯಶಸ್ವಿಯಾಗಲು ಏನು ಅಗತ್ಯ ಎಂಬುದನ್ನು ಬಲ್ಲೆ. ಆದರೆ, ನಾನು ಬಸಿನೆಸ್ ವಿರೋಧಿಯಲ್ಲ. ಏಕಸ್ವಾಮ್ಯದ ವಿರೋಧಿ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುತ್ತೇನೆ,’ ಎಂದು ರಾಹುಲ್ ಗಾಂಧಿ ತಮ್ಮ ಎಕ್ಸ್ ಪೋಸ್ಟ್ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.