ಮೈಸೂರು: ”ನನಗೂ ಕೂಡ ಅಂತರ್ಜಾತಿ ವಿವಾಹವಾಗುವ ಆಸೆ ಇತ್ತು. ಕಾನೂನು ಓದುವಾಗ ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆ ಆಗಬೇಕು ಅಂದುಕೊಂಡಿದ್ದೆ. ಆದರೆ ಹುಡುಗಿಯೇ ಒಪ್ಪಲಿಲ್ಲ, ಅವರ ಮನೆಯವರೂ ಒಪ್ಪಲಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು.
ಗುರುವಾರ ನಗರದಲ್ಲಿ ಜನಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೋಂದಣಿ ವೇದಿಕೆಯ ವೆಬ್ಸೈಟ್ ಉದ್ಘಾಟಿಸಿ ಅವರು ಮಾತನಾಡಿದರು.
”ನಾನು ಕಾನೂನು ಓದುವಾಗ ಒಬ್ಬ ಹುಡುಗಿ ಜೊತೆ ಸ್ನೇಹ ಮಾಡಿಕೊಂಡಿದ್ದೆ. ಇದಕ್ಕೆ ಬೇರೆ ಅರ್ಥ ಬೇಡ, ಸ್ನೇಹವಿತ್ತು. ಆಕೆಯನ್ನು ಮದುವೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದೆ. ಆದರೆ, ಹುಡುಗಿ ಹಾಗೂ ಮನೆಯವರು ಒಪ್ಪದ ಕಾರಣ ಮದುವೆ ಆಗಲಿಲ್ಲ. ಕೊನೆಗೆ ನಮ್ಮ ಜಾತಿಯವರನ್ನೇ ಮದುವೆಯಾಗಬೇಕಾದ ಪರಿಸ್ಥಿತಿ ಬಂತು” ಎಂದರು.
”ಅಂತರ್ಜಾತಿ ವಿವಾಹವಾದ ಎಲ್ಲ ಸಹೋದರ-ಸಹೋದರಿಯರಿಗೆ ಧನ್ಯವಾದಗಳು. ಅಂತರ್ಜಾತಿ ಮದುವೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಅದಕ್ಕೆ ಬೇಕಾದ ಎಲ್ಲ ಸಹಕಾರ ನೀಡಲಾಗುವುದು. ನಮ್ಮ ಸರ್ಕಾರವೂ ಕೂಡ ಸಹಾಯ, ಸಹಕಾರ ನೀಡುತ್ತದೆ. ನಮ್ಮ ಸಮಾಜದಲ್ಲಿನ ಜಾತಿ ವ್ಯವಸ್ಥೆ ಹೋಗಬೇಕಾದರೆ ಅಂತರ್ಜಾತಿ ವಿವಾಹ ಅಗತ್ಯ. ಜಾತಿ ವ್ಯವಸ್ಥೆಯು ಬಹಳ ಗಟ್ಟಿಯಾಗಿದೆ. ಇದರಿಂದ ಸಮಾಜ ಚಲನರಹಿತವಾಗಿದೆ. ಆರ್ಥಿಕ ಹಾಗೂ ಸಾಮಾಜಿಕ ಚಟುವಟಿಕೆ ಇಲ್ಲದಾಗ ಅಂತಹ ಸಮಾಜದಲ್ಲಿ ಚಲನೆ ಇರುವುದಿಲ್ಲ. ಅನೇಕರು ಸಮ ಸಮಾಜ ಮಾಡಲು ಪ್ರಯತ್ನ ಮಾಡಿದ್ದರೂ ಕೂಡ, ಸಂಪೂರ್ಣ ಯಶಸ್ವಿಯಾಗಿಲ್ಲ” ಎಂದು ಹೇಳಿದರು.