ಬೈಲಹೊಂಗಲ: ಮಾನವ ಕಳ್ಳ ಸಾಗಾಣಿಕೆ ಅಂತರ ರಾಜ್ಯ ಮತ್ತು ರಾಷ್ಟ್ರಗಳ ಮಟ್ಟದಲ್ಲಿ ನಿರಾತಂಕವಾಗಿ ನಡೆಯುತ್ತಿರುವ ಮಾನವ ಕಳ್ಳು ಸಾಗಾಣಿಕೆ ಇಂದಿನ ಯುವಶಕ್ತಿ ಪ್ರೇಮದ ಜಾಲ, ಹಣದ ಆಮಿಷ, ಉದ್ಯೋಗದ ಸುಳ್ಳು ಭರವಸೆ ನಂಬದೆ ಜಾಗೃತರಾಗಿ ಈ ಪಿಡಗನ್ನು ತಡೆಗಟ್ಟಲು ಸಾರ್ವಜನಿಕವಾಗಿ ಕೈ ಜೋಡಿಸಬೇಕೆಂದು ನಗರದ ಪ್ರಧಾನ ದಿವಾಣಿ ನ್ಯಾಯಾಧೀಶೆ ರೋಹಿಣಿ ಬಸ್ಸಾಪೂರ ಯುವಕರಿಗೆ ಕರೆ ನೀಡಿದರು.
ನಗರದ ಗಣಾಚಾರಿ ಶಿಕ್ಷಣ ಸಂಸ್ಥೆಯ ಪ್ರಥಮ ಪಿಯುಸಿ ವರ್ಗದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮತ್ತು ಮಾನವ ಕಳ್ಳ ಸಾಗಾಣಿಕೆಯ ಜಾಗೃತಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಗೆ ಮಹಿಳೆಯರು, ಅಪ್ರಾಪ್ತರು, ಮಕ್ಕಳು ಹಾಗೂ ಬಡವರು ಬಲಿಯಾಗುತಿದ್ದಾರೆ.
ಇದೊಂದು ಪ್ರಪಂಚದಲ್ಲಿ ಹಣ ಗಳಿಸುವ ಎರಡನೇ ‘ಅತಿ ದೊಡ್ಡ ದಂಧೆ’ ಎಂದೇ ಪರಿಗಣಿಸಲಾಗುತ್ತಿದೆ. ಈ ಬಗ್ಗೆ ಪ್ರಕರಣಗಳು ದಾಖಲಾದರು ಕೆಲ ಸಮಾಜಘಾತಕ ಜನರು ಕಾನೂನಿನ ಕಣ್ಣು ತಪ್ಪಿಸಿ ದೊಡ್ಡ ಮಟ್ಟದಲ್ಲಿ ಈ ಜಾಲ ಕಾರ್ಯಪ್ರವರ್ತವಾಗಿರುವದು ಕಳವಳಕಾರಿಯಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಮ್.ಆರ್.ಮೆಳವಂಕಿ ಮಾತನಾಡಿ, ಹಲವು ಕಾರಣಗಳಿಂದಾಗಿ ನಡೆಯುತ್ತಿರುವ ಮಾವನ ಕಳ್ಳ ಸಾಗಾಣಿಕೆಗೆ ಮಹಿಳೆಯರು, ಅಪ್ರಾಪ್ತರು, ಬಡವರು ಬಲಿಯಾಗುತ್ತಿದ್ದಾರೆ.
ಮಾನವ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟಲು ರಾಜ್ಯ ಸಿಐಡಿ ಘಟಕದಲ್ಲಿ ಆಂಟಿ ಹ್ಯೂಮನ್ ಟ್ರಾಫಿಕಿಂಗ್ ಸೆಲ್ ಸ್ಥಾಪಿಸಲಾಗಿದ್ದರೂ ಪೊಲೀಸರು ಕಣ್ಣು ತಪ್ಪಿಸಿ ವ್ಯವಸ್ಥಿತವಾಗಿ ಈ ದಂಧೆ ನಡೆಯುತ್ತಿದೆ.
ಮಾನವ ಕಳ್ಳ ಸಾಗಾಣಿಕೆ ನಿಯಂತ್ರನ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೂ ಸವಾಲಾಗಿದೆ. ಮಾನವ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟಲು ಸಿಐಡಿ ಘಟಕದಲ್ಲಿ ಆಂಟಿ ಹ್ಯೂಮನ್ ಟ್ರಾಫಿಕಿಂಗ್ ಸೆಲ್ ಸ್ಥಾಪಿಸಲಾಗಿದೆ. ದೇಶದಲ್ಲಿ ಶೇ. 70 ರಷ್ಟು ನಡೆದರೆ ಹೊರಗಡೆ ಶೇ. 30 ರಷ್ಟು ನಡೆಯುತ್ತಿದೆ. ಈ ಪೈಕಿ ಶೇ. 46 ಪ್ರಮಾಣದಲ್ಲಿ ವೈಶಾವಾಟಿಕೆ ಕಾರಣಕ್ಕಾಗಿ, ಶೇ. 26 ರಷ್ಟು ಭಿಕ್ಷಾಟನೆ ಹಾಗೂ ಶೇ 26 ರಷ್ಟು ಬಾಲಕಾರ್ಮಿಕ ಪದ್ದತಿಗಾಗಿ ನಡೆಯುತ್ತಿರುವ ಮಾನವ ಕಳ್ಳ ಸಾಗಾಣಿಕೆ ಒಂದು ಸಾಮಾಜಿಕ ಪಿಡಗಾಗಿದೆ ಎಂದರು.
ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ವಿದ್ಯಾರ್ಥಿ ಜೀವನ ಬಂಗಾರದ ಜೀವನವಿದ್ದಂತೆ ಬಂಗಾರವನ್ನ ಕಾಯಿಸಿ ಕರಗಿಸಿ ಸುತ್ತಿಗೆಯ ಪೆಟ್ಟು ತಿಂದು ನಂತರ ಉತ್ತಮ ಆಕರ್ಷಕವಾಗಿ ಎಲ್ಲರ ಮನಸ್ಸು ಗೆಲ್ಲುವ ಆಭರಣವಾಗುವಂತೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕಷ್ಟಪಟ್ಟು ಹಗಲಿರುಳು ಓದು ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮ ಗಮನ ಕೇಂದ್ರಿಕರಿಸಿದರೆ ನಿಮ್ಮ ಭವಿಷ್ಯ ಉಜ್ವಲವಾಗಲಿದೆ ಆ ನಿಟ್ಟಿನಲ್ಲಿ ಸತತ ಅಧ್ಯಯ ಮತ್ತು ಪ್ರಯತ್ನ ಇರಲೆಂದರು.
ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಪ್ರಾ. ಡಾ.ಸಿ.ಬಿ.ಗಣಾಚಾರಿ ಮಾತನಾಡಿ, ಕಾನೂನು ಬಲಿಷ್ಠವಾದಂತೆ ಬಾಲ್ಯವಿವಾಹ ಕಡಿಮೆಯಾಗಿ ವಿದ್ಯಾರ್ಥಿನಿಯರು ಓದು ಹೆಚ್ಚುತ್ತಿದೆ. ವಿದ್ಯಾರ್ಥಿಗಳು ಓದಿನ ಜೋತೆಗೆ ಮೌಲ್ಯಗಳು ಮತ್ತು ಸಂಸ್ಕಾರ ಬೆಳಸಿಕೊಂಡಾಗ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲಿಕ್ಕೆ ಸಾಧ್ಯ ಎಂದರು.
ಕಿರಿಯ ಶ್ರೇಣಿ ನ್ಯಾಯಾಧೀಶ ಬಸವರಾಜ ನಾಯ್ಕ್ ಮಾತನಾಡಿದರು. ವೇದಿಕೆಯ ಮೇಲೆ ನ್ಯಾಯವಾದಿ ಸಂಘದ ಉಪಾಧ್ಯಕ್ಷ ಅಶೋಕ ಸಿದ್ರಾಮನಿ, ಪ್ರಧಾನ ಕಾರ್ಯದರ್ಶಿ ವಿ.ಜಿ.ಕಟದಾಳ, ಆಪರ ಸರ್ಕಾರಿ ವಕೀಲ ರಮೇಶ ಕೊಲಕಾರ ಇದ್ದರು. ಕಾರ್ಯಕ್ರಮದಲ್ಲಿ ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ವಿತರಿಸಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಹೂ ನೀಡಿ ಬರಮಾಡಿಕೊಂಡರು.ಪಿಯುಸಿ ವಿಭಾಗದ ಪ್ರಾಚಾರ್ಯೆ ಸಿ.ಟಿ. ಕಲ್ಲೂರ ಸ್ವಾಗತಿಸಿದರು. ಶಿಕ್ಷಕಿ ಎಸ್.ಎಮ್.ತಲ್ಲೂರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪಿ.ಎಸ್.ಭರಮಣ್ಣವರ ವಂದಿಸಿದರು.