ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ನಲ್ಲಿ ಬದಲಾವಣೆಯಾಗಿದೆ. ಹು-ಧಾ ಪೊಲೀಸ್ ಕಮೀಷನರ್ ಹಾಗೂ ಕಾನೂನು ಸುವ್ಯವಸ್ಥೆ ಡಿಸಿಪಿಯನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆ ಸ್ಥಾನಗಳಿಗೆ ನೂತನವಾಗಿ ನೇಮಕವಾದ ಅಧಿಕಾರಿಗಳು ಬುಧವಾರ ಅಧಿಕಾರ ಸ್ವೀಕರಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮೀಷನರ್ ಆಗಿ ಎನ್ ಶಶಿಕುಮಾರ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಮಹಾನಿಂಗ ನಂದಗಾವಿ ಅಧಿಕಾರ ಸ್ವೀಕಾರ ಮಾಡಿದರು.
ಕಳೆದ ಕೆಲ ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಯುವತಿ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆ ಪ್ರಕರಣಗಳಲ್ಲಿ ಪೊಲೀಸ್ ವೈಫಲ್ಯ ಎದ್ದು ಕಾಣುತ್ತಿದೆ ಎಂದು ರಾಜಕೀಯ ನಾಯಕರು ಆರೋಪ ಮಾಡಿದ್ದರು. ಇದು ರಾಜ್ಯ ಸರ್ಕಾರಕ್ಕೆ ಇರಿಸುಮುರಿಸು ಉಂಟು ಮಾಡಿತ್ತು. ಅಂಜಲಿ ಕೊಲೆ ಪ್ರಕರಣದ ಬಳಿಕ ಡಿಸಿಪಿ ರಾಜೀವ್ ಅವರನ್ನು ಅಮಾನತು ಮಾಡಲಾಗಿತ್ತು. ನಗರದಲ್ಲಿ ಕೊಲೆ, ಕೊಲೆ ಯತ್ನ, ರೌಡಿಶೀಟರ್ಗಳನ್ನು ಹತೋಟಿಗೆ ತೆಗೆದುಕೊಳ್ಳಲು ಈ ಹಿಂದಿನ ಕಮೀಷನರ್ ರೇಣುಕಾ ಸುಕುಮಾರ್ ವಿಫಲವಾಗಿದ್ದಾರೆ ಎಂದು ರಾಜಕೀಯ ನಾಯಕರು ಆರೋಪಿಸಿದ್ದರು. ಇದೀಗ ಹುಬ್ಬಳ್ಳಿ ಪೊಲೀಸ್ ಕಮಿಷನರ್ ವರ್ಗಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ಎನ್ ಶಶಿಕುಮಾರ ಅವರನ್ನು ನೇಮಕ ಮಾಡಲಾಗಿದೆ.