ಬಳ್ಳಾರಿ,ಮೇ 17
ಕುರುಗೋಡು ತಾಲ್ಲೂಕಿನ ಮೆಣಸಿನಕಾಯಿ ಬೆಳೆಗಾರರು ಹಾಗೂ ನರ್ಸರಿ ಮಾಲೀಕರು ಉತ್ತಮ ಬೆಳೆ ಪಡೆಯಲು ಸೂಕ್ತ ಕ್ರಮ ಅನುಸರಿಸಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ನರ್ಸರಿ ಮಾಲೀಕರು ತಮ್ಮ ನರ್ಸರಿ ಚಟುವಟಿಕೆಗಳ ನಿಯಮ ಬದ್ಧಗೊಳಿಸುವ ನಿಟ್ಟಿನಲ್ಲಿ ಕಡ್ಡಾಯವಾಗಿ ಜಿ.ಎಸ್.ಟಿ ನೋಂದಾಯಿಸಿಕೊಳ್ಳಬೇಕು. ನರ್ಸರಿ ಜಾಗ ಗುತ್ತಿಗೆ ಪಡೆದಿದ್ದಲ್ಲಿ ನಿಯಾಮನುಸಾರ ಒಡಂಬಡಿಕೆ ಮಾಡಿಸಿಕೊಳ್ಳಬೇಕು. ನರ್ಸರಿ ಮಾಲೀಕರು ತಮ್ಮ ನರ್ಸರಿ ಮುಂಭಾಗ ನರ್ಸರಿಯ ಹೆಸರು ಇರುವ ನಾಮ ಫಲಕ ಅಳವಡಿಸುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.
ರೈತರಿಗೆ ಉತ್ತಮ ಗುಣಮಟ್ಟ ಸಸಿಗಳನ್ನು ನೀಡಲು ಅಳವಡಿಸಿಕೊಳ್ಳಬೇಕಾದ ವೈಜ್ಞಾನಿಕ ನರ್ಸರಿ ಕ್ರಮಗಳಾದ ಕೋಕೋಪಿಟ್ ಬಳಕೆ, ತರಕಾರಿ ನರ್ಸರಿಗಳಲ್ಲಿ ಕೀಟ ನಿರೋಧಕ ಬಲೆಗಳ ಬಳಕೆಯ ಬಗ್ಗೆ ಹಾಗೂ ಬೀಜೋಪಚಾರ ಕುರಿತು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳಬೇಕು. ಪ್ರತಿ ಸಸಿಗೆ ರೂ.45 ಪೈಸೆ ದರದಲ್ಲಿ ಕಡ್ಡಾಯವಾಗಿ ಮಾರಾಟ ಮಾಡಬೇಕು. ನಿಗಧಿತ ಬೆಲೆಗಿಂತ ಅಧಿಕ ಹಣ ಪಡೆದರೆ ಹಾಗೂ ನಿಯಮಗಳ ಪಾಲನೆ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳಲಾಗುವುದು ಎಂದು ತಿಳಿಸಿದ್ದಾರೆ.
ಮೆಣಸಿನಕಾಯಿ ಬೆಳೆಗಾರರು ಕಡ್ಡಾಯವಾಗಿ ನರ್ಸರಿ ಮೆಣಸಿನಕಾಯಿ ಸಸಿಗಳನ್ನು ಜಿ.ಎಸ್.ಟಿ ನೋಂದಣಿಯಾಗಿರುವ ನರ್ಸರಿಗಳಿಂದಲೇ ಖರೀದಿಸಿ, ಬಿಲ್ಲನ್ನು ಪಹಣಿಯಲ್ಲಿರುವ ರೈತ ಹೆಸರಿಗೆ ಪಡೆದು ನಾಟಿ ಮಾಡಬೇಕು ಹಾಗೂ ಪಡೆದಂತಹ ಬಿಲ್ಲನ್ನು ಬೆಳೆ ಮಾರಾಟ ಆಗುವವರೆಗೂ ಭದ್ರವಾಗಿ ಇಟ್ಟುಕೊಳ್ಳಬೇಕು.
ನರ್ಸರಿಗಳಲ್ಲಿ ಮಾಲೀಕರು ತಾವು ಉಪಯೋಗಿಸುವ ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ವಿವರಗಳನ್ನು ಕಡ್ಡಾಯವಾಗಿ ವಹಿಯಲ್ಲಿ ನಮೂದಿಸಬೇಕು. ರೈತರಿಂದ ಬೀಜ ಪಡೆದಿರುವ ಮತ್ತು ಸಸಿಗಳನ್ನು ವಿತರಿಸಿದ ದಿನಾಂಕಗಳ ವಹಿ ಸಹ ನಿರ್ವಹಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.