ಶ್ರೀನಗರ (ಜಮ್ಮು ಕಾಶ್ಮೀರ): ಪಹಲ್ಗಾಮ್ ದಾಳಿಯಲ್ಲಿ ಸ್ಥಳೀಯ ಕುದುರೆ ಸವಾರ ಸೇರಿದಂತೆ 26 ಪ್ರವಾಸಿಗರನ್ನು ಉಗ್ರರು ಹತ್ಯೆ ಮಾಡಿದ ಬಳಿಕ ಮಹತ್ವದ ಬೆಳವಣಿಗೆಯಲ್ಲಿ, ದಕ್ಷಿಣ ಕಾಶ್ಮೀರದ ಟ್ರಾಲ್ ಮತ್ತು ಬಿಜ್‌ಬೆರಾ ಪ್ರದೇಶದಲ್ಲಿನ ಇಬ್ಬರು ಲಷ್ಕರ್-ಎ-ತೋಯ್ಬಾ ಭಯೋತ್ಪಾದಕರ ಮನೆಗಳನ್ನು ಅಧಿಕಾರಿಗಳು ಶುಕ್ರವಾರ ನೆಲಸಮ ಮಾಡಿದ್ದಾರೆ.
ಬೈಸರನ್ ಪಹಲ್ಗಾಮ್ ದಾಳಿಯಲ್ಲಿ ಪ್ರಮುಖ ಪಾತ್ರವಿರುವ ಆರೋಪದ ಹಿನ್ನೆಲೆಯಲ್ಲಿ ಪುಲ್ವಾಮಾ ಜಿಲ್ಲೆಯ ಟ್ರಾಲ್‌ನಲ್ಲಿರುವ ಆಸಿಫ್ ಶೇಖ್ ಮತ್ತು ಅನಂತ್‌ನಾಗ್ ಜಿಲ್ಲೆಯ ಬಿಜ್‌ಬೆರಾದಲ್ಲಿರುವ ಆದಿಲ್ ಥೋಕರ್ ಅವರ ಮನೆಗಳನ್ನು ಸ್ಫೋಟಿಸಿ, ನೆಲಸಮ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮಂಗಳವಾರ ಪಹಲ್ಗಾಮ್‌ನ ಬೈಸರನ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪಹಲ್ಗಾಮ್‌ನ ಸ್ಥಳೀಯ, ನೇಪಾಳದ ಒಬ್ಬರು ಮತ್ತು ದೇಶದ ವಿವಿಧ ರಾಜ್ಯಗಳ ಪ್ರವಾಸಿಗರು ಸೇರಿದಂತೆ 26 ಜನರು ಪ್ರಾಣ ಕಳೆದುಕೊಂಡಿದ್ದರು.
ಆದಿಲ್ 2018ರಲ್ಲಿ ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದ. ಅಲ್ಲಿಂದ ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರಕ್ಕೆ ಮರಳುವ ಮುನ್ನ ಭಯೋತ್ಪಾದನಾ ತರಬೇತಿ ಪಡೆದಿದ್ದಾನೆ ಎಂದು ವರದಿಯಾಗಿದೆ.