ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿಗಳು ಬಿಟ್ಟರೆ ಯಾರೂ ಇದರಲ್ಲಿ ಮಧ್ಯಪ್ರವೇಶ ಮಾಡಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು. ಸದಾಶಿವನಗರ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿಗಳು ಬಿಟ್ಟರೆ ಯಾರೂ ಮಧ್ಯಪ್ರವೇಶ ಮಾಡಿಲ್ಲ. ಅದರ ಅವಶ್ಯಕತೆ ಯಾರಿಗೂ ಇಲ್ಲ.ನಾನು ಅಥವಾ ಸಿಎಂ ಯಾರಿಗೂ ಸೊಪ್ಪು ಹಾಕಲ್ಲ, ಯಾರೂ ಕೂಡ ಬಂದಿಲ್ಲ. ದರ್ಶನ್ ಸೇರಿ ನಾಲ್ಕು ಜನರನ್ನ ಒಂದು ವಾರ ಕಸ್ಟಡಿಗೆ ಕೇಳಿದ್ದರು. ಆದರೆ, ಎರಡು ದಿನ ಕೊಟ್ಟಿದ್ದಾರೆ. ಅಷ್ಟರಲ್ಲಿ ವಿಚಾರಣೆ ಮುಗಿದರೆ ಜೆಸಿಗೆ ಕೊಡ್ತಾರೆ ಎಂದರು.
ಬಿಜೆಪಿ ಶಾಸಕರ ಸಂಬಂಧಿ ಪ್ರಕರಣದಲ್ಲಿ ಭಾಗಿ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಇದರಲ್ಲಿ ಇರಬಹುದೇನೋ ಗೊತ್ತಿಲ್ಲ. ಪಕ್ಷದ ಆಧಾರದ ಮೇಲೆ ಈ ಕೇಸ್ ನೊಡ್ತಾ ಇಲ್ಲ. ಒಂದು ವೇಳೆ ನಮ್ಮ ಪಕ್ಷದಲ್ಲಿ ಇದ್ದರೂ ತಪ್ಪಿತಸ್ಥರೇ. ಬೇರೆ ಪಕ್ಷದಲ್ಲಿ ಇದ್ದರೂ ತಪ್ಪಿತಸ್ಥರೇ. ಯಾರು ಏನು ತಪ್ಪು ಮಾಡಿದ್ದಾರೆ ಅದರ ಮೇಲೆ ತನಿಖೆ ನಡೆಯುತ್ತದೆ ಎಂದರು.