ತೆಲಂಗಾಣ,09: ಲೋಕಸಭಾ ಚುನಾವಣೆ 2024 ಗೆ 4 ನೇ ಹಂತದ ಮತದಾನ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಮತ್ತೆ ಮೀಸಲಾತಿ ಚರ್ಚೆ ಮುನ್ನೆಲೆಗೆ ಬಂದಿದೆ. ಗೃಹ ಸಚಿವ ಅಮಿತ್ ಶಾ ತೆಲಂಗಾಣದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿ, ಎಸ್ ಸಿ/ಎಸ್ ಟಿಗಳ ಮೀಸಲಾತಿಯನ್ನು ಹೆಚ್ಚಿಸುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸುಳ್ಳುಗಳನ್ನು ಹೇಳುವ ಮೂಲಕ ಚುನಾವಣೆ ಎದುರಿಸಲು ಯತ್ನಿಸುತ್ತಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ, ಮೀಸಲಾತಿಯನ್ನೇ ರದ್ದುಗೊಳಿಸುತ್ತಾರೆಂದು ಕಾಂಗ್ರೆಸ್ ನವರು ಸುಳ್ಳು ಹೇಳುತ್ತಿದ್ದಾರೆ.
ಪ್ರಧಾನಿ ಮೋದಿ 10 ವರ್ಷಗಳಿಂದ ಸರ್ವಾನುಮತ ಪಡೆದು ಆಡಳಿತ ನಡೆಸುತ್ತಿದ್ದಾರೆ. ಆದರೆ ಅವರೆಂದೂ ಮೀಸಲಾತಿಯನ್ನು ರದ್ದುಗೊಳಿಸಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿಯನ್ನು ನೀಡುವ ಮೂಲಕ ಎಸ್ ಸಿ/ ಎಸ್ ಟಿ ಹಾಗೂ ಒಬಿಸಿಗಳ ಮೀಸಲಾತಿಯನ್ನು ಕಸಿದುಕೊಂಡಿದೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ.
2019 ರಲ್ಲಿ ತೆಲಂಗಾಣದ ಜನತೆ ನಮಗೆ 4 ಸ್ಥಾನಗಳನ್ನು ನೀಡಿದ್ದರು ಈ ಬಾರಿ 10 ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುತ್ತೇವೆ. ತೆಲಂಗಾಣ ಪ್ರಧಾನಿ ಮೋದಿ 400 ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದಕ್ಕೆ ಸಹಕಾರಿಯಾಗಲಿದೆ. 10 ಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ನೀಡಿ, ನಾವು ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿ ಎಸ್ ಸಿ/ ಎಸ್ ಟಿ ಹಾಗೂ ಒಬಿಸಿ ಮೀಸಲಾತಿಯನ್ನು ಏರಿಕೆ ಮಾಡುತ್ತೆವೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.