ಬಿಹಾರ,16: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾದ ನಂತರ, ಸದ್ಯದಲ್ಲೇ ಬಿಹಾರದಲ್ಲಿ ಸೀತಾ ಜನ್ಮಸ್ಥಳವಾದ ಸೀತಾ ಮರ್ಹಿಯಲ್ಲಿ ಸೀತಾ ಮಾತೆಗೊಂದು ಭವ್ಯ ಮಂದಿರವನ್ನು ಕಟ್ಟಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಬಿಹಾರದ ಸೀತಾಮರ್ಹಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.
ಬಿಹಾರದಲ್ಲಿ ಮೇ 20ರಂದು ಆ ರಾಜ್ಯದ ಎಲ್ಲಾ 40 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಸೀತಾಮರ್ಹಿಯಲ್ಲಿ ಮೇ 16ರಂದು ಬಿಜೆಪಿಯ ಬಹಿರಂಗ ಪ್ರಚಾರ ಹಮ್ಮಿಕೊಳ್ಳಲಾಗಿತ್ತು. ಪ್ರಚಾರದಲ್ಲಿ ಭಾಗವಹಿಸಿದ್ದ ಅಮಿತ್ ಶಾ ಮಾತನಾಡಿ, “ನಾವು (ಬಿಜೆಪಿ) ವೋಟ್ ಬ್ಯಾಂಕ್ ಗಳಿಗಾಗಿ ಹೆದರೋದಿಲ್ಲ. ಅಯೋಧ್ಯಯಲ್ಲಿ ಪ್ರಧಾನಿ ಮೋದಿಯವರು ರಾಮಮಂದಿರ ನಿರ್ಮಿಸಿದರು. ನಾವು ಬಿಹಾರದಲ್ಲಿರುವ ಸೀತಾ ಮಾತೆಯ ಜನ್ಮಸ್ಥಳವಾದ ಸೀತಾಮರ್ಹಿಯಲ್ಲಿ ಸೀತಾ ಮಾತೆಗೊಂದು ಭವ್ಯವಾದ ಮಂದಿರವನ್ನು ನಿರ್ಮಿಸುತ್ತೇವೆ’’ ಎಂದು ತಿಳಿಸಿದರು.
ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ವೇಳೆ, “ಯಾರು ಉದ್ಘಾಟನಾ ಸಮಾರಂಭದಿಂದ ದೂರ ಉಳಿದಿದ್ದರೋ ಅವರು ಸೀತಾ ಮಾತೆಗೆ ದೇವಸ್ಥಾನವನ್ನು ಯಾವತ್ತೂ ನಿರ್ಮಿಸುವುದಿಲ್ಲ. ಅಂಥ ದೇವಸ್ಥಾನವನ್ನು ನಿರ್ಮಿಸುವ ತಾಕತ್ತು ಇರುವುದು ಕೇವಲ ಮೋದಿಯವರಿಗೆ ಹಾಗೂ ಬಿಜೆಪಿಗೆ ಮಾತ್ರ’’ ಎಂದು ಅವರು ಗುಡುಗಿದರು.
ಇದೇ ವೇಳೆ, ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟದ ಜೊತೆಗೆ ಕೈ ಜೋಡಿಸಿರುವ ಬಿಹಾರದ ಲಾಲೂ ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ವಿರುದ್ಧ ಅಮಿತ್ ಶಾ ಅವರು ವಾಗ್ದಾಳಿ ನಡೆಸಿದರು. “ಲಾಲು ಪ್ರಸಾದ್ ಯಾದವ್ ಅವರು, ತಮ್ಮ ಜೀವಮಾನ ಪೂರ್ತಿ ಅಧಿಕಾರದಾಸೆಗಾಗಿಯೇ ಬದುಕಿದರು. ಈಗ ತಮ್ಮ ಪುತ್ರನನ್ನು ಸಿಎಂ ಮಾಡುವುದಕ್ಕಾಗಿ ಕಾಂಗ್ರೆಸ್ಸಿನ ತೊಡೆಯ ಮೇಲೆ ಹೋಗಿ ಕುಳಿತಿದ್ದಾರೆ. ಅಧಿಕಾರಕ್ಕಾಗಿಯೇ ಬದುಕಿದ ಅವರು, ಹಿಂದುಳಿದವರಿಗೆ, ನಿರ್ಗತಿಕರಿಗೆ ಏನನ್ನೂ ಮಾಡಲಿಲ್ಲ’’ ಎಂದು ಹೇಳಿದ್ದಾರೆ.