ಯಲ್ಲಮ್ಮಗುಡ್ಡದಲ್ಲಿ ಶೀಘ್ರ ಕೇಬಲ್ ಕಾರ್ ವ್ಯವಸ್ಥೆ ;ರೂ. ೧೨೧ ಕೋಟಿಯ ಮಾಸ್ಟರ್ ಪ್ಲಾನ್: ಸಚಿವ ಎಚ್.ಕೆ. ಪಾಟೀಲ

Ravi Talawar
ಯಲ್ಲಮ್ಮಗುಡ್ಡದಲ್ಲಿ ಶೀಘ್ರ ಕೇಬಲ್ ಕಾರ್ ವ್ಯವಸ್ಥೆ ;ರೂ. ೧೨೧ ಕೋಟಿಯ ಮಾಸ್ಟರ್ ಪ್ಲಾನ್: ಸಚಿವ ಎಚ್.ಕೆ. ಪಾಟೀಲ
oppo_0
WhatsApp Group Join Now
Telegram Group Join Now
ಸವದತ್ತಿ-20: ಉತ್ತರ ಕರ್ನಾಟಕದ ಪ್ರಶಿದ್ಧ ಧಾರ್ಮಿಕ ಕ್ಷೇತ್ರ ಯಲ್ಲಮ್ಮ ದೇವಸ್ಥಾನವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಕೇಬಲ್ ಕಾರ್ ವ್ಯವಸ್ಥೆಯ ಯೋಜನೆ ಇದೆ ಎಂದು ಯಲ್ಲಮ್ಮ ದೇವಸ್ಥಾನ ಪ್ರವಾಸೋಧ್ಯಮ ಮಂಡಳಿಯ ಅಧ್ಯಕ್ಷ ಹಾಗೂ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ತಾಲೂಕಿನ ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನದಲ್ಲಿ ಸೋಮವಾರ ಜರುಗಿದ ಯಲ್ಲಮ್ಮ ದೇವಸ್ಥಾನ ಪ್ರವಾಸೋಧ್ಯಮ ಮಂಡಳಿಯ ರಾಜ್ಯಮಟ್ಟದ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.ಲಕ್ಷಾಂತರ ಭಕ್ತ ಗಣ ಒಂದೆಡೆ ಸೇರಿ ಭಕ್ತಿ ಭಾವದಲ್ಲಿ ಜಾತ್ರೆಯನ್ನು ಸಂಭ್ರಮಿಸುವ ಈ ಶಕ್ತಿ ಕೇಂದ್ರವನ್ನು ಮಾದರಿ ಧಾರ್ಮಿಕ ಕ್ಷೇತ್ರವನ್ನಾಗಿಸುವ ಗುರಿ ಸರಕಾರದ್ದಾಗಿದೆ. ಈ ಕುರಿತು ಕಳೆದ ಬಾರಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಹಣಕಾಸಿನ ವಿಚಾರ ಚರ್ಚಿಸಲಾಗಿದ್ದು ನೀಲ ನಕ್ಷೆ ತಯಾರಿಸಿ ಸ್ಥಳ ನಿಗದಿ ಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಭಕ್ತರಿಗೆ ಮೂಲ ಸೌಕರ್ಯಗಳ ಕುರಿತಾದ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದ ಅವರು ಈ ರೂಪರೇಷಗಳ ಕುರಿತು ನೀಲ ನಕ್ಷೆ ಮುಖೇನ ತಿಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಮೊಹಮ್ಮದ ರೋಷನ್ ಮಾತನಾಡಿ, ದೇವಸ್ಥಾನದ ಅಭಿವೃದ್ಧಿ ಕುರಿತು ಎರಡು ಹಂತದ ಕಾಮಗಾರಿಗಳನ್ನು ಆಯೋಜಿಸಲಾಗಿದೆ. ಮೂಲ ದೇವಸ್ಥಾನದ ಸಂಪ್ರದಾಯ ಮತ್ತು ಆಚರಣೆಗೆ ಧಕ್ಕೆಯಾಗದಂತೆ ೧೦೦ ಮೀ ಸುತ್ತಲು ವೃತ್ತಾಕಾರದ ಕಟ್ಟಡ ನಿರ್ಮಿಸಿ ದರ್ಶನಾವಕಾಶ, ಮನಶ್ಯಾಂತಿಯಿಂದ ಪ್ರಾರ್ಥಿಸುವ ಅವಕಾಶ ನೀಡಲಾಗುವುದು. ಜೊತೆಗೆ ಇಲ್ಲಿ ದೇವಿ ನಾಮಸ್ಮರಣೆಯ ಸಂಗೀತ, ಭಜನೆಗಳಂತ ವ್ಯವಸ್ಥೆಗೆ ಆಧ್ಯತೆ ನೀಡಲಾಗುವದು. ರೂ. ೧೬ ಕೋಟಿ ಅನುದಾನದಲ್ಲಿ ಆಡಳಿತ ಕಚೇರಿ ನಿರ್ಮಿಸಿ ಅಲ್ಲಿಂದಲೇ ಎಲ್ಲವನ್ನು ನಿಯಂತ್ರಿಸುವ ಯೋಜನೆ ಇರಿಸಲಾಗಿದೆ. ಇದು ಭಕ್ತರ ಸುರಕ್ಷತೆಯ ಜೊತೆಗೆ ಸಿಬ್ಬಂದಿಗಳಿಗೂ ಅನುಕೂಲವಾಗಲಿದೆ.  ರೂ. ೪೦ ಕೋಟಿ ವೆಚ್ಚದಲ್ಲಿ ಎರಡು ಮಹಡಿಯ ಸರದಿ ಸಾಲಿನ ಸಂಕೀರ್ಣ ನಿರ್ಮಿಸಲಾಗುವುದು. ಇಲ್ಲಿ ೩೫೦೦ ಸಾವಿರಕ್ಕೂ ಅಧಿಕ ಜನ ವಿಶ್ರಮಿಸುವ ಸಾಮರ್ಥ್ಯ ಇದರಲ್ಲಿದೆ. ಜೊತೆಗೆ ಇಲ್ಲಿ ಮಹಿಳೆಯರಿಗೆ, ವೃದ್ಧರಿಗೆ ಪ್ರತ್ಯೇಕ ಕೊಠಡಿ, ಶೌಚಾಲಯ, ತಿನಿಸು ವ್ಯವಸ್ಥೆ ಇರಲಿದೆ. ಇಲ್ಲಿಂದಲೇ ದೇವಿ ದರ್ಶನಕ್ಕೆ ರೂ. ೧೩ ಕೋಟಿ ಅನುದಾನದಲ್ಲಿ ವ್ಯವಸ್ಥಿತವಾದ ಮಾರ್ಗ ನಿರ್ಮಿಸಲು ಯೋಜಿಸಲಾಗಿದೆ.
ರೂ. ೩೮ ಕೋಟಿಯಲ್ಲಿ ಅನ್ನದಾಸೋಹ ಭವನ, ಜಮದಗ್ನಿ ದೇವಸ್ಥಾನದ ಮೇಲಿನ ಜಾಗೆ ಸೇರಿ ಇತರೆಡೆ ಬರುವ ವಾಹನ, ಚಕ್ಕಡಿಗಳಿಗೆ ನಿಲುಗಡೆಗಾಗಿ ರೂ. ೩೬ ಲಕ್ಷ ಹಣ ಮೀಸಲಿರಿಸಲಾಗಿದೆ. ರೂ. ೧.೧೨ ಕೋಟಿಯಲ್ಲಿ ವ್ಯಾಪಾರಿವಲಯ ನಿರ್ಮಿಸಲು ನೀಲ ನಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ದೇವಸ್ಥಾನದಿಂದ ೨೦೦ ಮೀ ಸುತ್ತಲು ಅಗತ್ಯ ಸೇವೆಗಳ ವಾಹನ ಹೊರತು ಪಡಿಸಿ ಖಾಸಗಿ ವಾಹನಗಳ ಪ್ರವೇಶ ಮತ್ತು ಸಂಚಾರ ನಿಷೇಧಿಸಲು ತೀರ್ಮಾನಿಸಲಾಗಿದೆ. ಪವಿತ್ರ ಜಲ ಎಣ್ಣೆ ಹೊಂಡದ ನೀರು ಮಲೀನಗೊಳ್ಳದಿರಲು ಕೆಲೆವೆಡೆ ಉದ್ಯಾನವನದ ಮಾದರಿಗಳನ್ನು ನಿರ್ಮಾಣ, ಪಾರ್ಕಿಂಗ್ ಜಾಗೆ ಹತ್ತಿರದಲ್ಲಿಯೇ ಮೇವು ದಾಸೋಹಕ್ಕೂ ವ್ಯವಸ್ಥೆ ಸೇರಿ ರೂ. ೧೨೧ ಕೋಟಿಯ ಬೃಹತ್ ಯೋಜನೆಯ ಕುರಿತು ವಿವರಿಸಿದರು.
ಇನ್ನುಳಿದಂತೆ ರಸ್ತೆಗಳ ಅಧುನೀಕರಣ, ಗಣ್ಯರು ವಿಶ್ರಮಿಸುವ ಜಾಗೆ ಹಾಗೂ ಎರಡನೇ ಹಂತದ ಅನ್ನ ದಾಸೋಹ ಭವನ ನಿರ್ಮಾಣ, ಕ್ಯೂ ಕಾಂಪ್ಲೆಕ್ಸ, ಎಣ್ಣೆಹೊಂಡದಲ್ಲಿ ಕಲ್ಯಾಣಿ ಸೇರಿ ಇನ್ನು ಕೆಲ ಅಭಿವೃದ್ಧಿಗೆ ರೂ. ೮೬.೫ ಕೋಟಿ ಅನುದಾನದ ಯೋಜನೆ ಸಿದ್ಧವಿದೆ ಎಂದರು. ಇದಕ್ಕೂ ಮೊದಲು ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಗುಡ್ಡದ ಪರಿಸರ ಸುತ್ತಾಡಿ ಸ್ಥಳ ಪರೀಶೀಲಿಸಿದರು. ಬಳಿಕ ವ್ಯಾಪಾರಸ್ಥರಿಂದ ಮನವಿ ಸಲ್ಲಿಸಲಾಯಿತು. ಪ್ರವಾಸೋಧ್ಯಮ ಮಂಡಳಿಯ ಉಪಾಧ್ಯಕ್ಷರು ಹಾಗೂ ಸಚಿವ ಸತೀಶ ಜಾರಕಿಹೊಳಿ, ಶಾಸಕ ವಿಶ್ವಾಸ್ ವೈದ್ಯ, ಎಸ್‌ಪಿ ಭೀಮಾಶಂಕರ ಗುಳೇದ, ಸಿಇಓ ರಾಹುಲ್ ಶಿಂಧೆ, ತಹಶೀಲ್ದಾರ ಎಮ್.ಎನ್. ಹೆಗ್ಗನ್ನವರ, ಕಾರ್ಯದರ್ಶಿ ಅಶೋಕ ದುಡಗಂಟಿ, ಆಯುಕ್ತೆ ಗೀತಾ ಕೌಲಗಿ, ನಾಗರತ್ನಾ ಚೋಳಿನ, ವಿಜಯ ಸಂಗಪ್ಪಗೋಳ, ಬಸವರಾಜ ಅಯ್ಯನಗೌಡರ, ಧರ್ಮಾಕರ ಧರ್ಮಟ್ಟಿ, ಪ್ರವೀಣ ರಾಮಪ್ಪನವರ ಹಾಗೂ ಪ್ರಮುಖರಿದ್ದರು.
WhatsApp Group Join Now
Telegram Group Join Now
Share This Article