ಬಿಟ್‌ ಕಾಯಿನ್‌ ಹಗರಣದಲ್ಲಿ ಡಿವೈಎಸ್‌ಪಿ ಪೂಜಾರ್‌ ಬಂಧಿಸದಂತೆ ಹೈಕೋರ್ಟ್‌ ಆದೇಶ

Ravi Talawar
ಬಿಟ್‌ ಕಾಯಿನ್‌ ಹಗರಣದಲ್ಲಿ ಡಿವೈಎಸ್‌ಪಿ ಪೂಜಾರ್‌ ಬಂಧಿಸದಂತೆ ಹೈಕೋರ್ಟ್‌ ಆದೇಶ
WhatsApp Group Join Now
Telegram Group Join Now

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್ ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಶ್ರೀಧರ್ ಕೆ. ಪೂಜಾರ್‌ ಅವರನ್ನು ಮುಂದಿನ ವಿಚಾರಣೆಯರೆಗೆ ಬಂಧಿಸದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

ಪೊಲೀಸ್‌ ಅಧಿಕಾರಿ ಶ್ರೀಧರ್‌ ಕೆ. ಪೂಜಾರ್‌ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ಅವರು “ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಹೊಸದಾಗಿ ನಿರೀಕ್ಷಣಾ ಜಾಮೀನು ಕೋರಲಾಗಿದೆ. ಈ ಹಿಂದೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್‌ ಸೂಚನೆಯಂತೆ ತನಿಖಾಧಿಕಾರಿಯ ಮುಂದೆ ಪೂಜಾರ್‌ ವಿಚಾರಣೆಗೆ ಒಳಪಟ್ಟಿದ್ದರು. ಈ ಸಂದರ್ಭದಲ್ಲಿ ಪೂಜಾರ್‌ ಅವರ ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌ ಮತ್ತು ಪೆನ್‌ಡ್ರೈವ್‌ ಅನ್ನು ಜಪ್ತಿ ಮಾಡಲಾಗಿದೆ. ಈಗ ಅಹಂಕಾರವನ್ನು ತೃಪ್ತಿಪಡಿಸಿಕೊಳ್ಳಲು ಪೂಜಾರ್‌ ಅವರನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ” ಎಂದು ಆಕ್ಷೇಪಿಸಿದರು.

ಶ್ರೀಕಿಯು ತನ್ನ ಸ್ನೇಹಿತರನ್ನು ಸಂಧಿಸಲು ಅವಕಾಶ ಮಾಡಿಕೊಟ್ಟಿರುವುದು ಮತ್ತು ಶ್ರೀಕಿ ಇತರರನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿರುವ ಆರೋಪ ಪೂಜಾರ್‌ ಮೇಲಿದೆ. ಈ ಹಿಂದೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್‌ ಆದೇಶದಂತೆ ಮೂರು ಬಾರಿ ತನಿಖಾಧಿಕಾರಿಯ ಮುಂದೆ ಪೂಜಾರ್‌ ಹಾಜರಾಗಿದ್ದು, ತನಿಖಾಧಿಕಾರಿ ಹಿಂಬರಹ ನೀಡಿದ್ದಾರೆ. ಪೂಜಾರ್‌ ತನಿಖಾಧಿಕಾರಿಯ ಮುಂದೆ ಹಾಜರಾಗಲು ಸಿದ್ಧರಿದ್ದಾರೆ. ಆದರೆ, ಅವರ ಹಿತಾಸಕ್ತಿ ಕಾಪಾಡಬೇಕು. ಪೂಜಾರ್‌ ಅವರು ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಯಾಗಿದ್ದು, ಹಲವು ಪ್ರಕರಣಗಳಲ್ಲಿ ತನಿಖಾಧಿಕಾರಿಯಾಗಿದ್ದಾರೆ. ಒಂದೊಮ್ಮೆ ಪೂಜಾರ್‌ ಬಂಧನವಾದರೆ ಪ್ರತಿವಾದಿಗಳು ಪೂಜಾರ್‌ ಬಂಧನದ ವಿಚಾರವನ್ನು ಪ್ರಸ್ತಾಪಿಸಬಹುದು. ಅವರ ಇಡೀ ಸೇವೆಯು ಕಳಂಕಿತವಾಗಲಿದೆ ಎಂದರು.

WhatsApp Group Join Now
Telegram Group Join Now
Share This Article