ಚಲಿಸುವ ರೈಲಿನಿಂದ ಪ್ರಯಾಣಿಕರು ಬಿದ್ದು ಮೃತಪಟ್ಟರೆ ರೈಲ್ವೆ ಇಲಾಖೆಯಿಂದ ಪರಿಹಾರ: ಹೈಕೋರ್ಟ್ ಆದೇಶ

Ravi Talawar
ಚಲಿಸುವ ರೈಲಿನಿಂದ ಪ್ರಯಾಣಿಕರು ಬಿದ್ದು ಮೃತಪಟ್ಟರೆ ರೈಲ್ವೆ ಇಲಾಖೆಯಿಂದ ಪರಿಹಾರ: ಹೈಕೋರ್ಟ್ ಆದೇಶ
WhatsApp Group Join Now
Telegram Group Join Now

ಬೆಂಗಳೂರು30: ಚಲಿಸುತ್ತಿರುವ ರೈಲಿನಿಂದ ಪ್ರಯಾಣಿಕರು ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಲ್ಲಿ ಪ್ರಯಾಣಿಕರ ಕುಟುಂಬಕ್ಕೆ ರೈಲ್ವೆ ಇಲಾಖೆ ಪರಿಹಾರ ಪಾವತಿಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ. ರೈಲು ಇಳಿಯುವಾಗ ಸಂಭವಿಸಿದ ಅವಘಡದಲ್ಲಿ ಮೃತಪಟ್ಟ ಜಯಮ್ಮ ಎಂಬುವರ ಸಾವಿಗೆ ಪರಿಹಾರ ಕಲ್ಪಿಸುವ ಸಂಬಂಧ ರೈಲ್ವೆ ಪರಿಹಾರ ನ್ಯಾಯಮಂಡಳಿ ನಿರಾಕರಿಸಿತ್ತು. ಇದನ್ನೂ ಪ್ರಶ್ನಿಸಿ, ರಾಮನಗರ ಜಿಲ್ಲೆಯ ಚನ್ನಪಟ್ಟಣ ನಿವಾಸಿ ರೋಜಮಣಿ ಹಾಗೂ ಮತ್ತಿತರರು ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ ಅವರಿದ್ದ ಏಕಸದಸ್ಯ ಪೀಠ, ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ವಾರ್ಷಿಕ ಶೇ.7 ಬಡ್ಡಿಯೊಂದಿಗೆ 4 ಲಕ್ಷ ರೂ. ಪರಿಹಾರ ಪಾವತಿಸಲು ರೈಲ್ವೆ ಇಲಾಖೆಗೆ ನಿರ್ದೇಶನ ನೀಡಿದೆ. ಜೊತೆಗೆ, ಚಲಿಸುತ್ತಿರುವ ರೈಲಿನಿಂದ ಇಳಿಯುವ ವೇಳೆ ಪ್ರಯಾಣಿಕರು ಸಾವಿಗೀಡಾದರೆ, ಹಕ್ಕುದಾರರಿಗೆ ಪರಿಹಾರವನ್ನು ಪಾವತಿಸಬೇಕಾಗಿರುವುದು ರೈಲ್ವೆಯ ಕರ್ತವ್ಯವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮೃತ ಜಯಮ್ಮ ತನ್ನ ಸಹೋದರಿಯೊಂದಿಗೆ ತಪ್ಪಾಗಿ ಬೇರೊಂದು ರೈಲು ಹತ್ತಿದ್ದರು. ಇದು ಗೊತ್ತಾಗಿ ಅವರು ಕೆಳಗಿಳಿಯುವ ವೇಳೆ ರೈಲು ಚಲಿಸಲು ಆರಂಭಿಸಿತ್ತು. ಆಗ ನಿಯಂತ್ರಣ ಕಳೆದುಕೊಂಡು ಆಕಸ್ಮಿಕವಾಗಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಇದನ್ನು ಪರಿಗಣಿಸಿ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ನಿರ್ದೇಶಿಸುವಂತೆ ಕೋರಿದ್ದರು.

ಆದರೆ, ಈ ಘಟನೆ ಆಕಸ್ಮಿಕವಾಗಿ ನಡೆದಿದ್ದಲ್ಲ, ಉದ್ದೇಶಪೂರ್ವಕ ಎಂದು ರೈಲ್ವೆ ಇಲಾಖೆ ಹೇಳಿದರೂ ಅದಕ್ಕೆ ಸಾಕ್ಷ್ಯಾಧಾರ ಒದಗಿಸಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ರೈಲ್ವೆ ಹಕ್ಕುಗಳ ನ್ಯಾಯಮಂಡಳಿ ಹೊರಡಿಸಿರುವ ಆದೇಶವನ್ನು ತಳ್ಳಿಹಾಕುವಂತೆ ಅರ್ಜಿದಾರರು ವಾದಿಸಿದ್ದರು.

ರೈಲ್ವೆ ಪರ ವಕೀಲರು ವಾದ ಮಂಡಿಸಿ, ಮೃತ ಮಹಿಳೆ ತಪ್ಪಾಗಿ ಬೇರೊಂದು ರೈಲು ಹತ್ತಿದ್ದರು. ಬಳಿಕ ರೈಲು ಚಲಿಸಲು ಆರಂಭಿಸಿದ್ದರಿಂದ ಅವರು ಮುಂದಿನ ಮುಂದಿನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಇಲ್ಲವೇ ಅಲಾರಾಂ ಚೈನ್ ಎಳೆಯಬೇಕಿತ್ತು. ಅದೆರಡನ್ನೂ ಮಾಡದೇ ಚಲಿಸುವ ರೈಲಿನಿಂದ ಇಳಿಯಲು ಪ್ರಯತ್ನಿಸಿ ಸ್ವಯಂಪ್ರೇರಿತ ಮತ್ತು ಉದ್ದೇಶಪೂರ್ವಕವಾಗಿ ಜಿಗಿದಿದ್ದಾರೆ. ಹೀಗಾಗಿ ಘಟನೆ ಆಕಸ್ಮಿಕವಾಗಿ ಸಂಭವಿಸಿದೆ ಎನ್ನಲಾಗದು. ಆದ್ದರಿಂದ ರೈಲ್ವೆ ಕಾಯ್ದೆಯ ಸೆಕ್ಷನ್ 123(ಇ) ಅನ್ವಯ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.

 2014ರಲ್ಲಿ ಜಯಮ್ಮ ತನ್ನ ಸಹೋದರಿ ರತ್ನಮ್ಮ ಅವರೊಂದಿಗೆ ಚನ್ನಪಟ್ಟಣ ರೈಲು ನಿಲ್ದಾಣಕ್ಕೆ ಹೋಗಿ ಮೈಸೂರಿನ ಅಶೋಕಪುರಂಗೆ ಹೋಗಲು ‘ತಿರುಪತಿ ಪ್ಯಾಸೆಂಜರ್’ ರೈಲಿಗಾಗಿ ಕಾಯುತ್ತಿದ್ದರು. ಆಗ ‘ಟುಟಿಕೋರಿನ್ ಎಕ್ಸ್‌ಪ್ರೆಸ್’ ರೈಲು ಬಂತು. ಇಬ್ಬರೂ ಆ ರೈಲು ಹತ್ತಿದ್ದರು. ರೈಲು ಅಶೋಕಪುರಂಗೆ ಹೋಗುವುದಿಲ್ಲ ಎಂದು ತಿಳಿದ ನಂತರ ರೈಲಿನಿಂದ ಜಯಮ್ಮ ಇಳಿಯುತ್ತಿದ್ದರು. ಆ ವೇಳೆ ರೈಲು ಚಲಿಸಲು ಪ್ರಾರಂಭವಾಗಿತ್ತು, ಈ ವೇಳೆ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವಿಗೀಡಾದರು. ಈ ಘಟನೆಗೆ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ ಎಂದು ರೈಲ್ವೆ ನ್ಯಾಯಮಂಡಳಿ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮೃತರ ಕುಟಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು.

WhatsApp Group Join Now
Telegram Group Join Now
Share This Article