ದೆಹಲಿ26: ಸರ್ಕಾರಿ ಶಾಲೆಗಳಿಗೆ ಸರಿಯಾದ ಸಮಯಕ್ಕೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ಪೂರೈಕೆ ಮಾಡದ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ದೆಹಲಿ ಹೈಕೊರ್ಟ್, ರಾಷ್ಟ್ರೀಯ ಹಿತಾಸಕ್ತಿಗಿಂತ ವೈಯಕ್ತಿಯ ಪ್ರತಿಷ್ಠೆಗೆ ಜೋತು ಬಿದ್ದಿರುವ ಸಿಎಂ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡದೆ ರಾಜಕೀಯ ಡ್ರಾಮಾ ಮಾಡುತ್ತಿದ್ದಾರೆ ಎಂದು ತೀಕ್ಷ್ಣ ಮಾತುಗಳಲ್ಲಿ ಕಟುವಾಗಿ ಟೀಕಿಸಿದೆ.
ದೆಹಲಿಯಲ್ಲಿ ಆಡಳಿತ ಮಾಡುತ್ತಿರುವ ಆಮ್ ಆದ್ಮಿ ಪಕ್ಷ (ಆಪ್) ಕೇವಲ ಅಧಿಕಾರಕ್ಕೆ ಅಂಟಿಕೊಂಡಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಚಿಂತೆ ಇಲ್ಲ. ಮುಖ್ಯಮಂತ್ರಿಗೆ ಜನರ ಹಿತಕ್ಕಿಂತ ವೈಯಕ್ತಿಕ ರಾಜಕೀಯ ಮೇಲಾಟವೇ ಮುಖ್ಯವಾಗಿದೆ ಎಂದು ಆಪ್ ಪರ ವಕೀಲರನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.
ಪುಸ್ತಕ, ಸಮವಸ್ತ್ರ ಖರೀದಿಗೆ ನಿರ್ಧಾರ ಕೈಗೊಳ್ಳಲು ಸ್ಥಾಯಿ ಸಮಿತಿ ಸಭೆ ಸೇರದಿದ್ದರೆ ಹಣಕಾಸು ವಿಚಾರ ನಿರ್ವಹಣೆಗೆ ಒಬ್ಬ ಅಧಿಕಾರಿ ನೇಮಿಸುವಂತೆ ಈ ಹಿಂದೆ ಇದೇ ಕೇಸ್ ವಿಚಾರಣೆ ವೇಳೆ ದೆಹಲಿ ಸರ್ಕಾರಕ್ಕೆ ಕೋಟ್ ಸಲಹೆ ನೀಡಿತ್ತು.
ಸರ್ಕಾರದ ಪರವಾಗಿ ಹಾಜರಾದ ವಕೀಲರು, ಮುಖ್ಯಮಂತ್ರಿಗಳು ಕಾರಾಗೃಹದಲ್ಲಿದ್ದಾರೆ. ಸ್ಥಾಯಿ ಸಮಿತಿ ಸಭೆ ನಡೆಸಲು ಅವರ ಒಪ್ಪಿಗೆ ಅಗತ್ಯವಿದೆ. ಸಚಿವ ಸೌರಬ್ ಭಾರದ್ವಜ್ ಅವರು ಈ ಸಂಬಂಧ ಸಿಎಂ ಜತೆ ಚರ್ಚೆ ನಡೆಸಿದ್ದಾರೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದರು.
ವಕೀಲರ ಮಾತಿಗೆ ಆಕ್ಷೇಪಿಸಿದ ನ್ಯಾಯಪೀಠ,” ಮುಖ್ಯಮಂತ್ರಿ ಜೈಲು ಸೇರಿದ್ದರೂ ಅಲ್ಲಿಂದಲೇ ಆಡಳಿತ ಮಾಡುವುದಾಗಿ ಹೇಳಿಕೊಂಡು ಬಂದಿದ್ದೀರಿ. ಇದು ನಿಮ್ಮ ಆಯ್ಕೆಯಾಗಿದೆ. ಹಾಗಂತ ಇಷ್ಟವಿಲ್ಲದ ದಾರಿಯಲ್ಲಿ ಹೋಗುವಂತೆ ನಮಗೆ ಒತ್ತಾಯ ಮಾಡುತ್ತಿದ್ದೀರಾ?,” ಎಂದು ಪ್ರಶ್ನಿಸಿತು.