ಬೆಂಗಳೂರು, ಜುಲೈ 20: ಇತ್ತೀಚಿಗೆ ಕರ್ನಾಟಕದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲಂತೂ ಬೆಂಗಳೂರಿನಲ್ಲಿ ಸೈಬರ್ ವಂಚನೆ ಅಧಿಕವಾಗಿದೆ. ನಗರದಲ್ಲಿ ಸೈಬರ್ ವಂಚಕರ ಹಾವಳಿ ಮಿತಿ ಮೀರಿದ್ದು, ಪ್ರತಿ ವರ್ಷ ಹತ್ತು ಸಾವಿರಕ್ಕು ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಸೈಬರ್ ವಂಚಕರ ಬಲೆಗೆ ಬಿದ್ದು ಜನರು ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಸೈಬರ್ ಕ್ರೈಂ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಇಲಾಖೆ 1930 ಎಂಬ ಸಹಾಯವಾಣಿ ಆರಂಭಿಸಿದೆ.
ಈ ಕುರಿತು ಟ್ವೀಟ್ ಮಾಡಿದ ರಾಜ್ಯ ಪೊಲೀಸ್ ಇಲಾಖೆ, “ಆತ್ಮೀಯ ಆನ್ಲೈನ್ ಬಳಕೆದಾರರೇ ಸೈಬರ್ ವಂಚನೆಯಿಂದ ದೂರ ಇರಲು ನಿಮ್ಮ ನಡೆಯ ಯಾವುದೇ ಸುಳಿವು ವಂಚಕರಿಗೆ ನೀಡಬೇಡಿ. ಒಂದು ವೇಳೆ ನೀವು ಸೈಬರ್ ಬಲೆಯಲ್ಲಿ ಸಿಲುಕಿದ್ದರೆ ಹತ್ತರಿದ ಪೊಲೀಸ್ ಠಾಣೆಗೆ ದೂರು ನೀಡಿ. ಅಥವಾ ಸೈಬರ್ ಕ್ರೈಂ ಸಹಾಯವಾಣಿ 1930 ಗೆ ಕರೆ ಮಾಡಿ” ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಶುಕ್ರವಾರ ಮೈಕ್ರೋಸಾಫ್ಟ್ ಕ್ಲೌಡ್ ಸರ್ವೀಸ್ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಜಾಗತಿಕವಾಗಿ ತಾಂತ್ರಿಕ ಬಿಕ್ಕಟ್ಟು ತಲೆದೋರಿತ್ತು. ಲಕ್ಷಾಂತರ ಜನರು ಬ್ಲೂ ಸ್ಕ್ರೀನ್ ಆಫ್ ಡೆತ್ (BSOD) ದೋಷವನ್ನು ಎದುರಿಸಿದ್ದರು. ಈ ಬ್ಲೂ ಸ್ಕ್ರೀನ್ಲ್ಲೇ ರಾಜ್ಯ ಪೊಲೀಸ್ ಇಲಾಖೆ ಸೈಬರ್ ವಂಚಕರಿಂದ ಎಚ್ಚರ ವಹಿಸಿ ಎಂಬ ಸಂದೇಶ ಬರೆದು ಟ್ವೀಟ್ ಮಾಡಿದ್ದಾರೆ.