ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಅನೇಕ ರಸ್ತೆಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವೆಡೆ ಶನಿವಾರ ಬೆಳಗ್ಗೆಯೂ ಕೂಡ ವರ್ಷಧಾರೆಯಾಗಿದ್ದು, ಮತ್ತೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೆಹಲಿಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ರೆಡ್ ಆಲರ್ಟ್ ನೀಡಿತ್ತು. ಉತ್ತರ, ಪಶ್ಚಿಮ, ದಕ್ಷಿಣ, ಆಗ್ನೇಯ ಮತ್ತು ಮಧ್ಯ ದೆಹಲಿಯ ಕೆಲವು ಭಾಗಗಳಲ್ಲಿ ಮಿಂಚು ಮತ್ತು ಗುಡುಗು ಸಹಿತ ಮಳೆಯಾಗಲಿದೆ ಎಂದು ತಿಳಿಸಲಾಗಿತ್ತು. ಆದರೆ ಬಳಿಕ ರೆಡ್ ಅಲರ್ಟ್ ಬದಲಿಗೆ ಯೆಲ್ಲೋ ಆಲರ್ಟ್ ಘೋಷಣೆ ಮಾಡಲಾಗಿದೆ. ಎಚ್ಚರದಿಂದ ಇರುವಂತೆ ಜನರಿಗೆ ತಿಳಿಸಲಾಗಿದೆ.
ಶನಿವಾರ ಬೆಳಗ್ಗೆ 8.30ರ ವರೆಗೆ ಕಳೆದ 24 ಗಂಟೆಗಳ ಅವಧಿಯಲ್ಲಿ, ದೆಹಲಿಯ ಸಫ್ದರ್ಜಂಗ್‌ನಲ್ಲಿರುವ ಪ್ರಾಥಮಿಕ ಹವಾಮಾನ ಕೇಂದ್ರದಲ್ಲಿ 78.7 ಮಿ.ಮೀ., ಪ್ರಗತಿ ಮೈದಾನದಲ್ಲಿ 100 ಮಿ.ಮೀ., ಲೋಧಿ ರಸ್ತೆ 80 ಮಿ.ಮೀ., ಪುಸಾ 69 ಮಿ.ಮೀ. ಮತ್ತು ಪಾಲಂನಲ್ಲಿ 31.8 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಹಂಚಿಕೊಂಡಿದೆ.
ಶುಕ್ರವಾರ ರಾತ್ರಿ 11ರಿಂದ ಪಂಚಕುಯಿಯಾನ್ ಮಾರ್ಗ, ಮಥುರಾ ರಸ್ತೆ, ಶಾಸ್ತ್ರಿ ಭವನ, ಆರ್‌ಕೆ ಪುರಂ, ಮೋತಿ ಬಾಗ್, ಕಿದ್ವಾಯಿ ನಗರ ಮತ್ತು ಇತರ ಹಲವಾರು ಪ್ರದೇಶಗಳು ಸೇರಿದಂತೆ ದೆಹಲಿ-ಎನ್‌ಸಿಆರ್‌ನ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ.