ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರುಣ ಆರ್ಭಟ ನಿಂತಿದ್ದು, ಪ್ರವಾಸ ಪರಿಸ್ಥಿತಿ ಕೂಡ ನಿಯಂತ್ರಣಕ್ಕೆ ಬಂದಿದೆ. ಆದರೆ, ಜನ ಸಂಕಷ್ಟ ಮಾತ್ರ ದೂರಾಗಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರಲ್ಲಿ ಸಾಂಕ್ರಾಮಿಕ ರೋಗ ಕುರಿತು ಆತಂಕ ಹೆಚ್ಚಾಗಿದೆ.
ಮಂಗಳವಾರ ಮತ್ತು ಬುಧವಾರದಂದು ಪ್ರವಾಹದಿಂದ ತೀವ್ರ ಹಾನಿಗೊಳಗಾಗಿದ್ದ ಜಕ್ಕೂರು, ಡಾ.ಶಿವರಾಮಕಾರಂತ್ ಲೇಔಟ್ 2ನೇ ಹಂತದಲ್ಲಿ ನೀರು ಇಳಿಮುಖವಾಗುತ್ತಿದ್ದಂತೆ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಖಾಲಿ ನಿವೇಶನಗಳು ಹಾಗೂ ಚರಂಡಿಗಳಲ್ಲಿ ನೀರು ನಿಂತು ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳು ಹೆಚ್ಚಾಗಿವೆ. ಇದರಿಂದ ಸಾಂಕ್ರಾಮಿಕ ರೋಗ ಹೆಚ್ಚಾಗುವ ಕುರಿತು ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.
ಅಂತೆಯೇ, ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ನಿವಾಸಿಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಟ್ಟ ವಾಸನೆ ಬರುತ್ತಿರುವುದಾಗಿ ಹೇಳಿದ್ದು, ಫಾಗಿಂಗ್ ಸೇರಿದಂತೆ ಇತರೆ ಅಗತ್ಯ ಕ್ರಮಗಳ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.
ಡಾ.ಶಿವರಾಮಕಾರಂತ್ ಲೇಔಟ್ 2ನೇ ಹಂತದ ನಿವಾಸಿ ಕ್ಷೇಮಾಭಿವೃದ್ಧಿ ಸಂಘದ (ಆರ್ಡಬ್ಲ್ಯುಎ) ಉಪಾಧ್ಯಕ್ಷ ಲಕ್ಷ್ಮೀನರಸಿಮಯ್ಯ ಮಾತನಾಡಿ, ರೈಲು ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ, ರೈಲ್ವೇ ಹಳಿಯ ಚರಂಡಿ ಮುಚ್ಚಿ ಹೋಗಿದೆ. ಇದರಿಂತ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಮೊದಲ ಕ್ರಾಸ್ನಿಂದ ಎರಡನೇ ಕ್ರಾಸ್ವರೆಗಿನ ಬೀದಿಗಳು ಹಾನಿಗೊಳಗಾಗಿವೆ. ಕೆಲವು ಮನೆಗಳಲ್ಲಿ 4 ಅಡಿಗಳಷ್ಟು ನೀರು ತುಂಬಿವೆ. ಸಚಿವ ಕೃಷ್ಣ ಬೈರೇಗೌಡ ಅವರು ನಿವಾಸಿಗಳನ್ನು ಸ್ಥಳಾಂತರಿಸಲು ಟ್ರ್ಯಾಕ್ಟರ್ಗಳನ್ನು ನಿಯೋಜಿಸುವ ಮೂಲಕ ಪರಿಹಾರ ಒದಗಿಸಿದ್ದಾರೆ ಎಂದು ಹೇಳಿದ್ದಾರೆ.