ಬೆಂಗಳೂರು, ಅಕ್ಟೋಬರ್ 4: ಕಳೆದ ರಾತ್ರಿ ಬೆಂಗಳೂರಿನಾದ್ಯಂತ ಭಾರಿ ಮಳೆಯಾಗಿದ್ದು, ಹಲವೆಡೆ ನೀರು ನಿಂತಿದೆ. ಇದರಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ. ವೀರಸಂದ್ರ ಬಳಿ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದೆ. ಸಾಗರ್ ಜಂಕ್ಷನ್, ಡೈರಿ ಸಿಗ್ನಲ್ ರಾಯಸಂದ್ರ ಇನ್ನಿತರೆ ರಸ್ತೆಗಳು ಜಲಾವೃತವಾಗಿದ್ದು, ನಿಧಾನ ಗತಿಯ ಸಂಚಾರವಿರಲಿದೆಯೆಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಗೆ ವೀರಸಂದ್ರ ಬಳಿ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದೆ. ಇದರಿಂದಾಗಿ ವಾಹನ ಸಂಚಾಲಕರು ತೀವ್ರ ಕಷ್ಟಕ್ಕೊಳಗಾಗಿದ್ದಾರೆ. ಮಳೆ ನೀರು ಹೊರಹೋಗಲು ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ರಸ್ತೆಯಲ್ಲಿ ನೀರು ನಿಂತಿದೆ. ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ.
ಬೆಂಗಳೂರು ಸಂಚಾರ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಮೈಸೂರು ರಸ್ತೆ, ಗುಡ್ಡದಹಳ್ಳಿ ಜಂಕ್ಷನ್, ಕೆಂಗೇರಿ, ಬಿಳೇಕಲ್ಲಳ್ಳಿ ಸಿಗ್ನಲ್, ಜಿ.ಡಿ. ಮರ ಸಿಗ್ನಲ್, ಸಾಗರ್ ಜಂಕ್ಷನ್, ಡೈರಿ ಸಿಗ್ನಲ್, ದೊಡ್ಡ ಮರ, ಚೊಕ್ಕಸಂದ್ರ, ರಾಯಸಂದ್ರದಲ್ಲಿ ಅಲ್ಲಲ್ಲಿ ಮಳೆ ನೀರು ನಿಂತಿದೆ. ರಸ್ತೆಗಳು ಜಲಾವೃತವಾಗಿರುವ ಕಾರಣ ಈ ಎಲ್ಲಾ ಪ್ರದೇಶಗಳಲ್ಲಿ ನಿಧಾನ ಗತಿಯ ಸಂಚಾರವಿರುತ್ತದೆ. ಈ ಹಿನ್ನೆಲೆ ಸಂಚಾರ ದಟ್ಟಣೆಯೂ ಇರುತ್ತದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.