ಕಲಬುರಗಿ/ಯಾದಗಿರಿ, ಸೆಪ್ಟೆಂಬರ್ 27: ಕಲಬುರಗಿ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ನಿರಂತರವಾಗಿ ಮಳೆ (Rain) ಹಿನ್ನಲೆ ಭೀಮಾ ನದಿ ಹರಿವಿನ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ. ಇದರ ಜೊತೆಗೆ ಮಹಾರಾಷ್ಟ್ರದಿಂದ ನದಿಗೆ 3.40 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಪರಿಣಾಮ ಜೇವರ್ಗಿ ಪಟ್ಟಣದ ಸಮೀಪದ ಕಟ್ಟಿಸಂಗಾವಿ ಸೇತುವೆ ಮುಳುಗಡೆಯಾಗಿದೆ. ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ನಡು ರಸ್ತೆಯ ಮೇಲೆಯೇ ವಾಹನಗಳು ಕಿಲೋಮೀಟರ್ಗಟ್ಟಲೆ ಕ್ಯೂ ನಿಂತಿವೆ.
ಭಾರೀ ಮಳೆಗೆ ಭೀಮಾ ನದಿಯ ಭೋರ್ಗರೆತ; ಮನೆ, ದೇಗುಲಗಳಿಗೆ ನುಗ್ಗಿದ ಹಳ್ಳದ ನೀರು; ರಸ್ತೆ ಸಂಚಾರ ಸ್ಥಗಿತ

ಕಳೆದ 48 ಗಂಟೆಗಳಿಂದ ಕಲಬುರಗಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅವಾಂತರಗಳೇ ಸೃಷ್ಟಿಯಾಗಿದ್ದು, ಹಳ್ಳ ಭರ್ತಿಯಾಗಿ ಕರ್ಚಖೇಡ ಗ್ರಾಮಕ್ಕೆ ಮಳೆ ನೀರು ನುಗ್ಗಿದೆ. ಗ್ರಾಮದ ಹಲವು ಮನೆಗಳು, ದೇವಸ್ಥಾನಕ್ಕೆ ಹಳ್ಳದ ನೀರು ನುಗ್ಗಿದ ಪರಿಣಾಮ ಜನರು ಪರದಾಟ ನಡೆಸಿದ್ದಾರೆ. ಜೇವರ್ಗಿ ತಾಲೂಕಿನ ಯಂಕಂಚಿ ಗ್ರಾಮದ ಬಸವೇಶ್ವರ ದೇವಸ್ಥಾನ, ಮಹಾಲಕ್ಷ್ಮೀ ದೇವಸ್ಥಾನಗಳಿಗೂ ಪ್ರವಾಹದ ನೀರು ನುಗ್ಗಿದೆ.

