ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಬೆಳಿಗ್ಗೆ ಸುರಿದ ಭಾರಿ ಮಳೆಯಿಂದಾಗಿ ನಜಾಫ್‌ಗಢ ಪಟ್ಟಣದಲ್ಲಿ ಮನೆ ಕುಸಿದು, 28 ವರ್ಷದ ಮಹಿಳೆ ಮತ್ತು ಅವರ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಭಾರಿ ಗಾಳಿಯಿಂದಾಗಿ ಮರ ಉರುಳಿ ಬಿದ್ದ ಪರಿಣಾಮ ಮನೆ ಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಮಹಿಳೆಯ ಪತಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಧಾರಾಕಾರ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ನಗರದ ಹಲವೆಡೆ ನೀರು ನಿಂತಿದ್ದು, ಸಂಚಾರಕ್ಕೆ ಅಡ್ಡಿಯಾಯಿತು. ದೆಹಲಿಯ ಹಲವೆಡೆ ಮರಗಳು ಧರೆಗುರುಳಿವೆ. ಮುಂಜಾನೆ ಧೂಳಿನೊಂದಿಗೆ ಬಿರುಗಾಳಿಯೂ ಬೀಸಿತು. ಬೆಳಗ್ಗೆ 5.26ಕ್ಕೆ ಮನೆ ಕುಸಿದ ಬಗ್ಗೆ ಪಿಸಿಆರ್ ಕರೆ ಬಂದಿದೆ ಎಂದು ಪೊಲೀಸ್ ಆಯುಕ್ತ (ದ್ವಾರಕಾ) ಅಂಕಿತ್ ಸಿಂಗ್ ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ತಲುಪಿದಾಗ, ಗಾಳಿಯಿಂದಾಗಿ ದ್ವಾರಕಾ ಜಿಲ್ಲೆಯ ಜಾಫರ್‌ಪುರ್ ಕಲಾನ್ ಬಳಿಯ ಖಾರ್ಖರಿ ನಹರ್ ಗ್ರಾಮದಲ್ಲಿ ಮನೆ ಮೇಲೆ ಬೇವಿನ ಮರ ಬಿದ್ದಿರುವುದು ಕಂಡುಬಂದಿದೆ. ಘಟನೆಯಲ್ಲಿ ಮಹಿಳೆ, ಆಕೆಯ ಪತಿ ಮತ್ತು ಅವರ ಮೂವರು ಮಕ್ಕಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು ಎಂದು ಸಿಂಗ್ ಹೇಳಿದರು.