ಚಮೋಲಿ ಜುಲೈ 10: ಉತ್ತರಾಖಂಡದ ಚಮೋಲಿಯಲ್ಲಿ ಇಂದು(ಬುಧವಾರ) ಭಾರೀ ಭೂಕುಸಿತ ಸಂಭವಿಸಿದ್ದು, ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಜೋಶಿಮಠದ ಚುಂಗಿ ಧಾರ್‌ನಲ್ಲಿ ಬೆಟ್ಟದ ಬೃಹತ್ ಭಾಗವು ಕುಸಿದು ರಸ್ತೆಯ ಮೇಲೆ ಬೀಳುತ್ತಿರುವುದು, ದೊಡ್ಡ ಬಂಡೆಗಳು ಉರುಳಿ ಬೀಳುತ್ತಿರುವುದನ್ನು 30 ಸೆಕೆಂಡುಗಳ ವಿಡಿಯೊ ತೋರಿಸುತ್ತದೆ. ಜನರು ಭಯಭೀತರಾಗಿ ಸುರಕ್ಷಿತ ಜಾಗಕ್ಕೆ ಓಡುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. ಅವರಲ್ಲಿ ಹಲವರು ತಮ್ಮ ಫೋನ್‌ಗಳಲ್ಲಿ ಈ ದೃಶ್ಯವನ್ನು ಸೆರೆಹಿಡಿಯುತ್ತಿರುವುದು ಕಂಡುಬಂದಿದೆ.
ಭೂಕುಸಿತದಿಂದ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಜನರು ಹಾಗೂ ವಾಹನಗಳು ಸಿಲುಕಿಕೊಂಡಿವೆ. ಬದರಿನಾಥ್ ಹೆದ್ದಾರಿಯಲ್ಲಿ ಸಂಚಾರ ನಿರ್ಬಂಧಿಸಿದ್ದು ಭೂಕುಸಿತ ಸಂಭವಿಸಿದಾಗ ಅಧಿಕಾರಿಗಳು ಅವಶೇಷಗಳನ್ನು ತೆರವುಗೊಳಿಸುತ್ತಿದ್ದರು. ಕೂಡಲೇ ಪೊಲೀಸರು ಮತ್ತು ಆಡಳಿತಾಧಿಕಾರಿಗಳನ್ನು ಕರೆಸಿ ಅವಶೇಷಗಳನ್ನು ತೆರವುಗೊಳಿಸಲಾಗಿದ್ದು, ತಡರಾತ್ರಿ ವೇಳೆಗೆ ರಸ್ತೆ ತೆರೆಯುವ ಸಾಧ್ಯತೆ ಇದೆ.
ಕಳೆದ ಕೆಲವು ದಿನಗಳಿಂದ ಉತ್ತರಾಖಂಡದ ಕೆಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಬೆಟ್ಟಗಳಲ್ಲಿ ಭೂಕುಸಿತಗಳು ಉಂಟಾಗಿದ್ದು, ಬದರಿನಾಥಕ್ಕೆ ಹೋಗುವ ಹೆದ್ದಾರಿಯು ಕಲ್ಲುಮಣ್ಣುಗಳಿಂದ ಮುಚ್ಚಿದ್ದು ಹಲವಾರು ಸ್ಥಳಗಳಲ್ಲಿ ಸಂಚಾರ ನಿರ್ಬಂಧಿಸಲ್ಪಟ್ಟಿದೆ. ನಿರಂತರ ಮಳೆಯಿಂದಾಗಿ ಹೆಚ್ಚಿನ ಸಂಖ್ಯೆಯ ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಅದೇ ವೇಳೆ ಚಂಪಾವತ್ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳ ಹಲವಾರು ಗ್ರಾಮಗಳು ಭಾರೀ ಪ್ರಮಾಣದಲ್ಲಿ ಜಲಾವೃತವಾಗಿವೆ.