ಭೂರಮೆಯ ಸ್ವರ್ಗ ಕಪ್ಪತ್ತಗುಡ್ಡ| ಕಪ್ಪತಗುಡ್ಡ ಗದಗ ಜಿಲ್ಲೆಯ ಅಸ್ಮಿತೆ

Ravi Talawar
ಭೂರಮೆಯ ಸ್ವರ್ಗ ಕಪ್ಪತ್ತಗುಡ್ಡ| ಕಪ್ಪತಗುಡ್ಡ ಗದಗ ಜಿಲ್ಲೆಯ ಅಸ್ಮಿತೆ
WhatsApp Group Join Now
Telegram Group Join Now

ಏಷ್ಯಾದ ಪರಿಶುದ್ಧ ಗಾಳಿಯ ಆಗರ.ಪರಿಸರ ಪ್ರಿಯರ ನೆಚ್ಚಿನ ತಾಣ

‘ಎಪ್ಪತ್ತು ಗಿರಿ ಸುತ್ತುವುದಕ್ಕಿಂತ ಕಪ್ಪತ್ತಗಿರಿ ಸುತ್ತುವುದು ಮೇಲು’, ‘ಕಣ್ಣಿದ್ದವನು ಕನಕಗಿರಿ ನೋಡಬೇಕು, ಕಾಲಿದ್ದವನು ಕಪ್ಪತ್ತಗುಡ್ಡ ನೋಡಬೇಕು’ ಎನ್ನುವ ಹಲವಾರು ನುಡಿಗಟ್ಟುಗಳು ಕಪ್ಪತ್ತಗಿರಿ ಕುರಿತು ಉತ್ತರ ಕರ್ನಾಟಕದಾದ್ಯಂತ ಮನೆ ಮಾತಾಗಿವೆ.
ಕಪ್ಪತ್ತಗಿರಿ – ಎಪ್ಪತ್ತು ಗಿರಿಗಳಿಗಿಂತ ಮೇಣ್ ಇದು ಏಷ್ಯಾದ ಶುದ್ಧಗಾಳಿಯ (Pure Air In Asia)ಕಾರ್ಖಾನೆ ಎಂದು ಹೇಳಿದರೆ ತಪ್ಪಾಗಲಾರದು.ಕಪ್ಪತ್ತಗಿರಿ (ಕಪ್ಪತಗುಡ್ಡ) ಉತ್ತರ ಕರ್ನಾಟಕದ ಸಹ್ಯಾದ್ರಿ, ಜೀವವೈವಿಧ್ಯ ತಾಣ. ಅಪಾರ ಖನಿಜ ಸಂಪತ್ತಿನ ಆಗರ.ಮುಂಗಾರು ಮಳೆಯ ಸಿಂಚನದಿಂದ ಕಪ್ಪತಗುಡ್ಡ ಈಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಇದು ಪ್ರವಾಸಿಗರ ಆಕರ್ಷಣೆಗೆ ಪ್ರಮುಖ ಕಾರಣವಾಗಿದೆ.
ಈಗಂತೂ ಪ್ರವಾಸಿಗರಿಗಂತೂ ಭೂಲೋಕದ ಸ್ವರ್ಗವನ್ನೇ ಕಣ್ತುಂಬಿಕೊಂಡಷ್ಟು ಸಂಭ್ರಮ.ಬೀಸುವ ತಂಗಾಳಿ ಚದುರುತ್ತಿರುವ ಮೋಡಗಳನ್ನ ಇನ್ನೇನು ಓಡಿಸಿಕೊಂಡು ಹೋಗುವಂತಿದೆ. ಶ್ವೇತಮೋಡಗಳ ನಡುವೆ ಹಚ್ಚಹಸಿರ ಪರ್ವತ ಕಣ್ಮನ ಸೆಳೆಯದೇ ಇರಲ್ಲ. ಗದಗ ಜಿಲ್ಲೆಯ ಶಿರಹಟ್ಟಿ ಹಾಗೂ ಮುಂಡರಗಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಈ ಕಪ್ಪತ್ತಗುಡ್ಡ ಏಷ್ಯಾದಲ್ಲಿಯೇ ಶುದ್ಧಗಾಳಿಗೆ ಹೆಸರುವಾಸಿ. ಹೀಗಾಗಿಯೇ ನೋಡಿ ವಾಯು ವಿಹಾರಕ್ಕೂ ಈ ಸ್ಪಾಟ್ ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿದೆ.ಪರಿಶುದ್ಧ ಗಾಳಿ ಬೀಸುವ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ. ಈ ಎಲ್ಲ ಕಾರಣಗಳಿಂದ ಕಪ್ಪತ್ತಗಿರಿಯನ್ನು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಯಲಾಗುತ್ತದೆ.
ಈ ತಾಣ ಹಸಿರ ಸೊಬಗು ತುಂಬಿರುವ ದಟ್ಟ ಕಾನನ, ಈ ಕಾಡಿನಲ್ಲಿ ಬೆಟ್ಟದ ತುದಿಯಲ್ಲಿ ಸುಮಾರು 250 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಅನ್ನಜ್ಞಾನ ದಾಸೋಹ ಮಠವಿದೆ. ಈ ಮಠವು ದಕ್ಷಿಣ ಸಸ್ಯಕಾಶಿಯೆಂದು ಪ್ರಖ್ಯಾತವಾಗಿದೆ.
ಕಪ್ಪತ್ತಗುಡ್ಡವು ಖನಿಜ, ನೈಸರ್ಗಿಕ ಸಂಪತ್ತು ಹೊಂದಿದೆ.ಈ ಪ್ರದೇಶವನ್ನು ಇತ್ತೀಚೆಗೆ ಕರ್ನಾಟಕ ಸರ್ಕಾರವು ವನ್ಯಜೀವಿ ಅಭಯಾರಣ್ಯವಾಗಿ ಘೋಷಿಸಿದೆ.ಒಟ್ಟಾಗಿ 17,872 ಹೆಕ್ಟೇರ್ ಇರುವ ಕಪ್ಪತಗುಡ್ಡ ಅರಣ್ಯ ಪ್ರದೇಶವು ಗದಗ ತಾಲೂಕಿನಲ್ಲಿ 401.811 ಹೆಕ್ಟೇರ್, ಮುಂಡರಗಿ ತಾಲೂಕಿನಲ್ಲಿ 15,433.673 ಹೆಕ್ಟೇರ್, ಮತ್ತು ಶಿರಹಟ್ಟಿ ತಾಲೂಕಿನಲ್ಲಿ 2016 ಹೆಕ್ಟೇರ್ಗಳಷ್ಟು ಪ್ರದೇಶವನ್ನು ಹಂಚಿಕೊಂಡಿದೆ.ಇದರಲ್ಲಿ 89.92 ಹೆಕ್ಟೇರ್ ಔಷಧೀಯ ಸಸ್ಯಗಳ ಸಂಗ್ರಹಣೆಗೆ ಮಾತ್ರ ಮೀಸಲಿಡಲಾಗಿದೆ. ಈ ಪ್ರದೇಶವನ್ನು ನೂರಾರು ವರ್ಷಗಳಿಂದ ಔಷಧೀಯ ಸಸ್ಯಗಳ ವಾಸಸ್ಥಾನ ಎಂದು ಕರೆಯಲಾಗುತ್ತದೆ.ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಅಡಿಯಲ್ಲಿ ಬರುವ ಕಪ್ಪತ್ತಗುಡ್ಡದ ಪ್ರಸಿದ್ಧ ತಾಣಗಳಲ್ಲಿ ಒಂದಾದ ಶ್ರೀ ಗೆಜ್ಜಿ ಸಿದ್ದಾವಧೂತರ ಮಠ,  ಕಪ್ಪಮಲ್ಲೇಶ್ವರ ದೇವಸ್ಥಾನ ಗಾಳಿಗುಂಡಿ ಬಸವಣ್ಣ ದೇವಸ್ಥಾನ ಹಾಗೂ ದೈವಿವನವಿದೆ.

#ಅಕ್ಕಪಕ್ಕದ ಜಿಲ್ಲೆಯ ಜನ:
ಕಪ್ಪತಗುಡ್ಡಕ್ಕೆ ಗದಗ ಮಾತ್ರವಲ್ಲದೇ ಕೊಪ್ಪಳ, ಬಳ್ಳಾರಿ, ಹಾವೇರಿ ಮತ್ತು ಧಾರವಾಡ ಜಿಲ್ಲೆಯಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಬಹಳಷ್ಟು ಜನ ಕೇರಳ, ಮಡಿಕೇರಿ, ಚಿಕ್ಕಮಗಳೂರು ಪ್ರವಾಸ ಕೈಗೊಳ್ಳುತ್ತಿದ್ದ ಜನ  ಈಗೀಗ ಕಪ್ಪತಗುಡ್ಡಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಬಾರಿ ಮಳೆ ಉತ್ತಮವಾಗಿ ಆಗುತ್ತಿರುವ ಕಾರಣ ಕಪ್ಪತಗುಡ್ಡ ಯಾವುದೇ ಗಿರಿಶಿಖರಗಳ ತಾಣಕ್ಕೂ ಕಡಿಮೆ ಇಲ್ಲದಂತೆ ಹಸಿರಿನಿಂದ ಕಂಗೊಳಿಸುತ್ತಿದೆ. ಹೀಗಾಗಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿಯವರು.

#ಔಷಧಿಗಳ ಸಸ್ಯಲೋಕ/ವನಸ್ಪತಿಗಳ ತಾಣ:
ಕಪ್ಪತ್ತಗುಡ್ಡ ಇಂದಿಗೂ ತನ್ನ ಮಣ್ಣು, ಗಿಡ, ಮರಗಳೆಲ್ಲದರಲ್ಲೂ ಔಷಧೀಯ ಗುಣ ಹೊಂದಿದೆ. ಅತೀ ಹೆಚ್ಚು ಆಯುರ್ವೇದಿಕ್ ಗಿಡಗಳನ್ನ ಹೊಂದಿರೋ ಕಾರಣಕ್ಕಾಗಿ ಇಲ್ಲಿಗೆ ಬಂದ್ ಹೋದ್ರೆ ಸಾಕು ಯಾವ ದವಾಖಾನೆನೂ ಬೇಡ ಎಂಬ ಪ್ರತೀತಿ ಇದೆ.
‘ಎಪ್ಪತ್ತು ಗಿರಿಗಳಿಗಿಂತ ಕಪ್ಪತ್ತಗಿರಿ ಮೇಲೆ’ ಎಂಬುದು
ಸ್ಕಂದ ಪುರಾಣದಲ್ಲಿನ ಉಲ್ಲೇಖ.ಅಂದರೆ ಎಪ್ಪತ್ತು ಗಿರಿಗಳಲ್ಲಿ
ಸಿಗದ ಔಷಧಿ ಗಿಡಮೂಲಿಕೆಗಳು ಕಪ್ಪತ್ತಗುಡ್ಡ ಒಂದರಲ್ಲೇ
ಸಿಗುವ ಕಾರಣಕ್ಕೆ ಈ ಮಾತು ಬಂತೆಂದು ಹಿರಿಯರು
ಹೇಳುತ್ತಾರೆ. ಗಿಡಮೂಲಿಕೆಗಳನ್ನು ಅರಸಿ ವರ್ಷವಿಡೀ
ಇಲ್ಲಿಗೆ ಎಲ್ಲೆಲ್ಲಿಂದಲೋ ಜನ ಬರುತ್ತಲೇ ಇರುತ್ತಾರೆ.

#ಕಪ್ಪತ್ತಗುಡ್ಡದಲ್ಲಿರುವ ಔಷಧೀಯ ಸಸ್ಯಗಳು:

ಗುಡ್ಡದಲ್ಲಿ ಸಸ್ಯಗಳಾದ ಆಲ, ಅತ್ತಿ, ಅರಳೆ, ಬನ್ನಿ, ಬಿಲ್ವಿ, ಹೊಳೆಮತ್ತಿ, ನಾಗಲಿಂಗ ಪುಷ್ಮ, ಮಾವು ಅಂಟವಾಳ, ನೇರಳೆ, ಬೇವು, ಲೋಬಾನ ಮತ್ತು ಹಲಸು ಸೇರಿದಂತೆ ದೈವಿ ವನ ನಿರ್ಮಾಣ ಮಾಡಲಾಗಿದ್ದು, ಇದರ ಜೊತೆ ಸಾವಿರಾರು ಎಕರೆ ಪ್ರದೇಶದಲ್ಲಿ ಲಕ್ಷಾಂತರ ಸಂಪ್ರದಾಯಿಕ ಗಿಡಮರ ಬೆಳಸಲಾಗಿದೆ. ಕಪ್ಪತ್ತಗಿರಿ ಹಸಿರಿನ ಹೊಸ ಮೆರಗು ನೀಡಲಾಗಿದ್ದು ಹಸಿರು ಸಂವರ್ಧನೆಗೊಂಡು ನೆಲ,ಜಲ,ವನ್ಯಜೀವಿಗಳ ರಕ್ಷಣೆ ಇಲಾಖೆಯ ಮಂತ್ರ ಆಗಲಿದೆ.

#ಹಸಿರು ಹೊನ್ನು- ಹಸಿರು ಉಸಿರು:
ಲಕ್ಷಾಂತರ ಸಸಿಗಳ ಪಾಲನೆ-ಪೋಷಣೆ ಮಾಡುವ ಮೂಲಕ ಸಾವಿರಾರು ಹೆಕ್ಟೇರ್ ಈ ಪ್ರದೇಶದಲ್ಲಿ ದೈವಿ ವನ, ನೆಡುತೋಪುಗಳು ಮತ್ತು ರಸ್ತೆ ಬದಿ ಮರ ಬೆಳಸುವುದು ಶಾಲಾವನ, ಮಗುವಿಗೊಂದು ವನ ನಿರ್ಮಾಣ ಮಾಡುವುದು ಸೇರಿದಂತೆ ‘ಹಸಿರು ಹೊನ್ನು- ಹಸಿರು ಉಸಿರು’ ಯೋಜನೆ ಜಾರಿಗೊಳಿಸಿ ಕಪ್ಪತ್ತಗುಡ್ಡದ ಆಪತ್ತುನ್ನು ದೂರಗೊಳಿಸುವ ಕಾಲ ಸನ್ನಿಹತವಾಗಿದೆ ಎಂದು ಹೇಳಲು ಖುಷಿ ಎನಿಸುತ್ತದೆ.

#ಪ್ರಾಣಿ ಸಂಕುಲ:
ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯ ಸುಮಾರು 32,346 ಹೆಕ್ಟೇರ್‌ಗಳನ್ನು ಒಳಗೊಂಡಿದೆ ಮತ್ತು ಜಲ ಪ್ರದೇಶಗಳು, ಕಾಡುಗಳು, ಪೊದೆಗಳು ಮತ್ತು ಹುಲ್ಲುಗಾವಲುಗಳು ಸೇರಿದಂತೆ ವಿವಿಧ ಪರಿಸರ ವ್ಯವಸ್ಥೆಗಳನ್ನು ಹೊಂದಿದೆ. ಇದು ಲಂಗೂರ್‌ಗಳು, ಜಿಂಕೆಗಳು, ಕಾಡು ಬೆಕ್ಕುಗಳು, ಪಕ್ಷಿಗಳು, ಕೃಷ್ಣಮೃಗಗಳು, ಚುಕ್ಕೆ ಜಿಂಕೆಗಳು, ಬೊಗಳುವ ಜಿಂಕೆಗಳು, ಚಿರತೆಗಳು, ಭಾರತೀಯ ತೋಳಗಳು ಮತ್ತು ಪಟ್ಟೆ ಹೈನಾಗಳಿಗೆ ಸುರಕ್ಷಿತ ತಾಣವಾಗಿದೆ ಎಂದು ಹೇಳಲಾಗುತ್ತದೆ.

ಒಟ್ಟಾರೆಯಾಗಿ ಏಷ್ಯಾದಲ್ಲಿಯೇ ಅತಿ ಹೆಚ್ಚು ಪರಿಶುದ್ಧ ಗಾಳಿಯ ಪ್ರದೇಶ ಎಂದು ಖ್ಯಾತಿ ಪಡೆದ ನಮ್ಮ ಈ ಕಪ್ಪತಗುಡ್ಡ ಅಥವಾ ಕಪ್ಪತ್ತಗಿರಿ.ನೀವೂ ಒಮ್ಮೆ ಭೇಟಿ ನೀಡಿ,ಶುದ್ಧ ಗಾಳಿ ಉಸಿರಾಡಿಸಿ, 10 ವರ್ಷಗಳ ಹೆಚ್ಚಿನ ಆಯುಷ್ಯ ಆರೋಗ್ಯ ಪಡೆಯಿರಿ..
ಕೊನೆಯದಾಗಿ ಕಪ್ಪತ್ತಗುಡ್ಡವು ಪ್ರವಾಸಿತಾಣ ವ್ಯಾಪ್ತಿಗೆ ಒಳಪಟ್ಟರೆ ಅದು ಅರಣ್ಯ ನಾಶ ಹಾಗೂ ಪರಿಸರ ಮಾಲಿನ್ಯಕ್ಕೆ ರಹದಾರಿ ಮಾಡಿಕೊಟ್ಟಂತಾಗುತ್ತದೆ. ಪರಿಸರ ಸೂಕ್ಷ್ಮ ವಲಯಗಳು ಮಾನವನ ಹಸ್ತಕ್ಷೇಪದಿಂದ ದೂರವಿದ್ದಷ್ಟು ಒಳಿತು. ಕಪ್ಪತ್ತಗುಡ್ಡವನ್ನು ಪ್ರವಾಸಿತಾಣವನ್ನಾಗಿ ಮಾಡಿದರೆ ಅಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಅಲ್ಲಿನ ಪ್ರಾಣಿ ಸಂಕುಲ ಭಯದಿಂದ ನಾಡು ಸೇರಿ ಜನರ ಜೀವನದ ಅಸ್ತಿತ್ವಕ್ಕೆ ಧಕ್ಕೆ ಉಂಟು ಬರಬಹುದು ಹಾಗೂ ಪ್ಲಾಸ್ಟಿಕ್ ಮತ್ತು ಮತ್ತಿತರ ವಸ್ತುಗಳ ಬಳಕೆ ಹೆಚ್ಚಾಗುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಹಾಗೂ ವನ್ಯಜೀವಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ಕಪ್ಪತ್ತಗುಡ್ಡವನ್ನು ಯಥಾರೀತಿ ಕಾಯ್ದುಕೊಳ್ಳಬೇಕು ಎಂಬುದು ಪರಿಸರ ಪ್ರಿಯರ ಕಾಳಜಿಯಾಗಿದೆ.

#ಹೇಗೆ ತಲುಪಬಹುದು…?
ಕಪ್ಪತ್ತಗುಡ್ಡವು ಹುಬ್ಬಳ್ಳಿ ವಿಮಾನ ನಿಲ್ದಾಣವು ಕಪ್ಪತಗುಡ್ಡಕ್ಕೆ ಹತ್ತಿರದಲ್ಲಿದೆ. ಇದು 64 ಕಿ.ಮೀ ದೂರದಲ್ಲಿದೆ. ಮುಂದಿನ ಹತ್ತಿರದ ವಿಮಾನ ನಿಲ್ದಾಣವೆಂದರೆ ಬೆಳಗಾವಿಯ ಸಾಂಬ್ರೆ ವಿಮಾನ ನಿಲ್ದಾಣ, ಇದು ಸುಮಾರು 128 ಕಿ.ಮೀ ದೂರದಲ್ಲಿದೆ.ಗದಗ ನಗರದಿಂದ 31 ಕೀ ಮೀ, ಶಿರಹಟ್ಟಿ ಪಟ್ಟಣದಿಂದ 20 ಕೀ ಮೀ, ಲಕ್ಷ್ಮೇಶ್ವರ ಪಟ್ಟಣದಿಂದ 38 ಕೀ ಮೀ ಹಾಗೂ ಮುಂಡರಗಿಯಿಂದ 39 ಕೀ ಮೀ, ಹತ್ತಿರದ ಡೋಣಿ ಊರಿನಿಂದ 3 ಕೀ ಮೀ ಗಳಷ್ಟು ದೂರದಲ್ಲಿದೆ. ಕಡಕೋಳದಿಂದ 5 ಕೀ ಮೀ ಗಳಷ್ಟು ದೂರದಲ್ಲಿದೆ.
#ವೀಕ್ಷಣೆಯ ಅವಧಿ:
ಜೂನ್ ದಿಂದ ಫೆಬ್ರುವರಿ ತಿಂಗಳ ವರೆಗೆ

– ಬಸವರಾಜ ಎಮ್ ಯರಗುಪ್ಪಿ ಶಿಕ್ಷಕರು, ಹವ್ಯಾಸಿ ಬರಹಗಾರರು
ದೂರವಾಣಿ 9742193758

WhatsApp Group Join Now
Telegram Group Join Now
Share This Article