ಸರ್ಕಾರಿ ಔಷಧಾಲಯಗಳ ಮೇಲೆ ಕಟ್ಟುನಿಟ್ಟಿನ ನಿಗಾ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Ravi Talawar
ಸರ್ಕಾರಿ ಔಷಧಾಲಯಗಳ ಮೇಲೆ ಕಟ್ಟುನಿಟ್ಟಿನ ನಿಗಾ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದಲ್ಲಿ ಉತ್ಪಾದನೆಯಾಗುವ ಔಷಧಗಳು ಸೇರಿದಂತೆ ಸರ್ಕಾರಿ ಔಷಧಾಲಯಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ವಿಕಾಸಸೌಧದಲ್ಲಿ ಇಂದು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅವರು ಗರಂ ಆದರು.

ರಾಜ್ಯದ ಮಾರುಕಟ್ಟೆಯಲ್ಲಿ ಸಾಕಷ್ಟು ಕಳಪೆ ಗುಣಮಟ್ಟದ ಔಷಧಿಗಳು ಪೂರೈಕೆ ಆಗುತ್ತಿದೆ. ಯಾರ ಹಂಗು ಇಲ್ಲದೇ ಮನಬಂದಂತೆ ಔಷಧಿಗಳನ್ನು ಜನರ ಮನೆಗೆ ಪೂರೈಸುತ್ತಿದ್ದಾರೆ. ಇದು ಜನರ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಡ್ರಗ್ ಕಂಟ್ರೋಲ್ ಇಲಾಖೆಯ ಮುಖ್ಯ ಉದ್ದೇಶವೇ ಪಬ್ಲಿಕ್ ಹೆಲ್ತ್. ಸಾರ್ವಜನಿಕರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಔಷಧಿಗಳ ಗುಣಮಟ್ಟದ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು. ಆದರೆ, ಆ ರೀತಿಯ ಕಾರ್ಯವೈಖರಿ ಇಲಾಖೆಯ ಅಧಿಕಾರಿಗಳಿಂದ ಕಂಡುಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಔಷಧಿಗಳ ಗುಣಮಟ್ಟದ ವಿಚಾರದಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳುತ್ತಿದ್ದೀರಿ ಎಂಬ ಬಗ್ಗೆ ವಿಸ್ತೃತ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಎಷ್ಟು ಕಳಪೆ ಔಷಧಿಗಳ ತಯಾರಕರ ಮೇಲೆ ಕ್ರಮ ತೆಗೆದುಕೊಂಡಿದ್ದೀರಾ? ಯಾವ ಔಷಧಿಗಳನ್ನು ಟೆಸ್ಟಿಂಗ್‌ಗೆ ಒಳಪಡಿಸಲಾಗಿದೆ, ಕಳಪೆ ಗುಣಮಟ್ಟದ ಔಷಧಿಗಳು ಮಾರುಕಟ್ಟೆಯಲ್ಲಿ ಸಿಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಆ್ಯಕ್ಷನ್ ಪ್ಲಾನ್ ಸಿದ್ಧಪಡಿಸುವಂತೆ ಡ್ರಗ್ ಕಂಟ್ರೋಲರ್​ಗೆ ಸೂಚನೆ ನೀಡಿದರು.

ಎಷ್ಟು ಫಾರ್ಮಸಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂಬ ಬಗ್ಗೆ ವರದಿ ಕೊಡಿ. ಸುಮ್ಮನೆ ಸ್ಪೆಷಲ್ ಡ್ರೈವ್ ಮಾಡುತ್ತಿದ್ದೇವೆ ಎಂದು ಭಾಷಣ ಬಿಗಿಯಬೇಡಿ. ನೀವು ಕೊಡುತ್ತಿರುವ ಅಂಕಿ ಅಂಶಗಳಲ್ಲಿ ಯಾವುದೇ ಪರಿಣಾಮಕಾರಿ ಕಾರ್ಯ ಕಂಡುಬರುತ್ತಿಲ್ಲ ಎಂದು ಔಷಧ ನಿಯಂತ್ರಣ ಅಧಿಕಾರಿಗಳಿಗೆ ಸಚಿವರು ಚಾಟಿ ಬೀಸಿದರು.

WhatsApp Group Join Now
Telegram Group Join Now
Share This Article