ರಾಯಬಾಗ: ಶಿಕ್ಷಣ ಇಲಾಖೆ ಮತ್ತು ಸರ್ಕಾರಕ್ಕೆ ಮುಜುಗರ ಉಂಟುಮಾಡಿರುವ ತಾಲೂಕಿನ ನಿಡಗುಂದಿ ಗ್ರಾಮದ ಅಂಬೇಡ್ಕರ್ ನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್. ಅವರು ಗುರುವಾರ ಸೇವೆಯಿಂದ ಅಮಾನತ್ತು ಮಾಡಿ ಆದೇಶ ಮಾಡಿರುತ್ತಾರೆ.
ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರು ಮೇ.೨೭ ರಂದು ತಾಲೂಕಿನ ನಿಡಗುಂದಿ ಗ್ರಾಮದ ಅಂಬೇಡ್ಕರ್ ನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ನಾಲ್ಕು ಶಾಲೆ ಕೊಠಡಿಗಳನ್ನು ಮಂಜೂರು ಮಾಡಿಸಬೇಕೆಂದು ಆಗ್ರಹಿಸಿ ನಿಡಗುಂದಿ ಶಾಲೆಯಿಂದ ಪಟ್ಟಣದ ಬಿಇಒ ಕಚೇರಿ ವರೆಗೆ ಮೌನ ಕಾಲ್ನಡಿಗೆ ಮೂಲಕ ಆಗಮಿಸಿ, ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಉಪವಾಸ ಸತ್ಯಾಗ್ರಹ ನಡೆಸಿದ್ದರು.
ಸರ್ಕಾರಿ ನೌಕರರು ಸರ್ಕಾರದ ವಿರುದ್ಧ ಪ್ರತಿಭಟನೆ, ಸತ್ಯಾಗ್ರಹ ನಡೆಸಲು ಅವಕಾಶ ಇಲ್ಲವೆಂದು ಬಿಇಒ ಮತ್ತು ತಹಶೀಲ್ದಾರ ಅವರು ಹೇಳಿದ್ದರೂ, ಅಂದು ಅವರ ಮಾತನ್ನು ಕೇಳದೇ ಪ್ರತಿಭಟನೆ ನಡೆಸಿ, ಉಪವಾಸ ಸತ್ಯಾಗ್ರಹ ನಡೆಸಿದ್ದರಿಂದ, ಬಿಇಒ ಅವರು ಮೇಲಾಧಿಕಾರಿಗಳ ಗಮನಕ್ಕೆ ತಂದು ಕರ್ತವ್ಯ ಲೋಪದಡಿ ವೀರಣ್ಣ ಮಡಿವಾಳರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಬಿಇಒ ಅವರು ಈಗಾಗಲೇ ಶಾಲೆಯನ್ನು ೭ನೇ ತರಗತಿ ವರೆಗೆ ಉನ್ನತಿಕರೀಸಿದ್ದು, ಜೊತೆಗೆ ೨ ಕೊಠಡಿಗಳನ್ನು ಮಂಜೂರು ಮಾಡಿರುವುದಾಗಿ ತಿಳಿಸಿದ್ದರು. ತಹಶೀಲ್ದಾರರವರು ಕೂಡಲ ವೀರಣ್ಣ ಅವರನ್ನು ಮನವೊಲಿಸಿ ಸತ್ಯಾಗ್ರಹ ಹಿಂಪಡೆಯಲು ತಿಳಿಸಿದ್ದರಿಂದ ಶಿಕ್ಷಕ ವೀರಣ್ಣ ಅವರು ಪ್ರತಿಭಟನೆ ಹಿಂಪಡೆದಿದ್ದರು.
ಪ್ರಕರಣ : ತಾಲೂಕಿನ ನಿಡಗುಂದಿ ಗ್ರಾಮದ ಅಂಬೇಡ್ಕರ ತೋಟದ ಸರಕಾರಿ ಶಾಲೆಗೆ ಹೆಚ್ಚುವರಿ ಕೊಠಡಿಗಳ ಮಂಜೂರಾತಿಗಾಗಿ ಆಗ್ರಹಿಸಿ ಶಾಲೆಯ ಮುಖ್ಯೋಪಾಧ್ಯಾಯ ವೀರಣ್ಣ ಮಡಿವಾಳರ ಅವರು ಮಂಗಳವಾರ ಮಧ್ಯಾಹ್ನ ನಿಡಗುಂದಿ ಅಂಬೇಡ್ಕರ ತೋಟದ ಶಾಲೆಯಿಂದ ರಾಯಬಾಗ ಪಟ್ಟಣದ ಬಿಇಒ ಕಚೇರಿ ವರೆಗೆ ಅಂಬೇಡ್ಕರ ಭಾವಚಿತ್ರದೊಂದಿಗೆ ಕಾಲ್ನಡಿಗೆ ಮೂಲಕ ಆಗಮಿಸಿ ಪಟ್ಟಣದ ಬಿಇಒ ಕಚೇರಿಯ ಮುಂಭಾಗದಲ್ಲಿ ಕುಳಿತು ಉಪವಾಸ ಸತ್ಯಾಗ್ರಹ ನಡೆಸಿದರು.